ಉಡುಪಿ: ಉಡುಪಿಯಲ್ಲಿ ದಿನ ನಿತ್ಯ ಟ್ರಾಫಿಕ್ ಸಮಸ್ಯೆ ಮಿತಿ ಮೀರುತ್ತಿದ್ದು, ರಸ್ತೆಯುದ್ದಕ್ಕೂ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ನಗರದಲ್ಲಿ ಉಂಟಾಗಿರುವ ಸಂಚಾರ ನಿಯಂತ್ರಿಸಲು ನಗರಸಭೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಉಡುಪಿ ನಾಗರಿಕರ ಕಲ್ಯಾಣ ವೇದಿಕೆ ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸದಾಶಿವ ರಾವ್ ಅವರು, ಉಡುಪಿ ನಗರಸಭೆಯು ನಗರದ ಹಳೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಧೂಮಾವತಿ ದೈವಸ್ಥಾನದ ಸುತ್ತಲಿದ್ದ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಉಡುಪಿಯ ಮಧ್ಯಭಾಗದಲ್ಲಿರುವ, ಸರಿಸುಮಾರು ಒಂದು ಎಕರೆ ವಿಸ್ತೀರ್ಣದ ಈ ಸರ್ಕಾರಿ ಒಡೆತನದ ಖಾಲಿ ಜಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಈ ವಿಶಾಲವಾದ ಪ್ರದೇಶವನ್ನು ಶುಲ್ಕ ಸಹಿತ ವಾಹನ ನಿಲುಗಡೆ ಪ್ರದೇಶವಾಗಿ (ಪೇಯ್ಡ್ ಪಾರ್ಕಿಂಗ್) ಮೀಸಲಿಡಬೇಕೆಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಒಂದರ ಹಿಂದೆ ಒಂದಾಗಿ ವಾಣಿಜ್ಯ ಕಟ್ಟಡಗಳು ನಿರ್ಮಾಣವಾದರೂ, ಅವುಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಜಾರಿಯಾಗಲಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಅನೇಕ ಕಟ್ಟಡಗಳಲ್ಲಿ ವಾಹನ ನಿಲುಗಡೆಗಾಗಿ ಮೀಸಲಾಗಿದ್ದ ನೆಲಮಾಳಿಗೆಗಳು ನಂತರ ಅಂಗಡಿಗಳಾಗಿ ಮಾರ್ಪಟ್ಟವು. ಪರಿಣಾಮವಾಗಿ ವಾಹನಗಳು ರಸ್ತೆಯತ್ತ ಹರಿದುಬಂದವು. ರಸ್ತೆ ಸಂಚಾರ ದಟ್ಟಣೆಯು ನಿಯಂತ್ರಣ ತಪ್ಪಿತು. ಹಾಗಾಗಿ ನೆಲ್ಲಿಕಟ್ಟೆಯಲ್ಲಿರುವ ಸರ್ಕಾರದ ಖಾಲಿ ಜಾಗವನ್ನು ಪಾರ್ಕಿಂಗ್ ಗೆ ಮೀಸಲಿಡಿ. “ವಾಣಿಜ್ಯ ಲಾಭಕ್ಕಿಂತ ಸಾರ್ವಜನಿಕ ಹಿತವೇ ಮುಖ್ಯ” ಎನ್ನುವುದು ಉಡುಪಿ ನಾಗರಿಕರ ಕಲ್ಯಾಣ ವೇದಿಕೆಯ ಒತ್ತಾಯ.