ಮಂಗಳೂರು:ಮಂಗಳೂರು ಜಿಲ್ಲಾಧಿಕಾರಿಗಳ ಅಧಿಕೃತ ಬಂಗಲೆಯ ನಾಮಫಲಕದಲ್ಲಿ ಜಿಲ್ಲಾಧಿಕಾರಿಗಳ ಪತ್ನಿಯ ಹೆಸರನ್ನು ನಮೂದಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಸರ್ಕಾರಿ ಆಸ್ತಿಗಳಲ್ಲಿ ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ಪ್ರದರ್ಶಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ಪ್ರಶ್ನೆ ಎತ್ತಿದ್ದಾಗಿ ತಿಳಿಸಿದರು.
“ಮಂಗಳೂರು ಜಿಲ್ಲಾಧಿಕಾರಿಗಳ ಬಂಗಲೆಯ ಹೊರಭಾಗದಲ್ಲಿರುವ ನಾಮಫಲಕದಲ್ಲಿ ಮೊದಲಿಗೆ ಜಿಲ್ಲಾಧಿಕಾರಿಗಳ ಪತ್ನಿಯ ಹೆಸರನ್ನು ಹಾಗೂ ನಂತರ ಜಿಲ್ಲಾಧಿಕಾರಿಗಳ ಹೆಸರನ್ನು ನಮೂದಿಸಲಾಗಿದೆ. ಸರ್ಕಾರಿ ಆಸ್ತಿಯಲ್ಲಿ ಖಾಸಗಿ ವ್ಯಕ್ತಿಗಳ ಹೆಸರನ್ನು ನಮೂದಿಸಲು ಅವಕಾಶವಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದು ಅವರು ಪ್ರಶ್ನಿಸಿದರು.
ಈ ಹಿಂದೆ ಈ ಸ್ಥಳವನ್ನು ‘ಕಲೆಕ್ಟರ್ಸ್ ಗೇಟ್’ ಎಂದೇ ಗುರುತಿಸಲಾಗುತ್ತಿತ್ತು ಮತ್ತು ಯಾವುದೇ ವ್ಯಕ್ತಿಯ ಹೆಸರನ್ನು ಅಲ್ಲಿ ನಮೂದಿಸಲಾಗಿರಲಿಲ್ಲ. ಸರ್ಕಾರಿ ನಿವಾಸದಲ್ಲಿ ಹೆಸರು ಪ್ರದರ್ಶಿಸಬೇಕಾದರೆ ಸಂಬಂಧಪಟ್ಟ ವ್ಯಕ್ತಿ ಸರ್ಕಾರಿ ಹುದ್ದೆಯಲ್ಲಿರಬೇಕು ಅಥವಾ ಸರ್ಕಾರದಿಂದ ಆ ಹುದ್ದೆಯ ಆಧಾರದ ಮೇಲೆ ಆ ನಿವಾಸವನ್ನು ಹಂಚಿಕೆ ಪಡೆದಿರಬೇಕು ಎಂದು ಪ್ರತಿಭಾ ಕುಳಾಯಿ ಅಭಿಪ್ರಾಯಪಟ್ಟರು.

ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬಹುದು ಎಂಬ ನಿರೀಕ್ಷೆಯಿಂದ ಕೆಲವು ದಿನ ಕಾಯ್ದಿದ್ದೆ. ಆದರೆ ನಾಮಫಲಕವನ್ನು ತೆರವುಗೊಳಿಸುವ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ಎರಡು ಬಾರಿ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.
ಇನ್ನೂ ಒಂದು ವಾರ ಕಾಯಲಿದ್ದು, ಈ ಅವಧಿಯಲ್ಲೂ ಕ್ರಮ ಕೈಗೊಳ್ಳದಿದ್ದರೆ ಕಾನೂನಾತ್ಮಕ ಹೋರಾಟದ ಕುರಿತು ಚಿಂತನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿಗಳ ಬಂಗಲೆ ಆವರಣದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ವಿವಿಧ ಕಾಮಗಾರಿಗಳು ನಡೆಯುತ್ತಿರುವ ಬಗ್ಗೆಯೂ ಅವರು ಪ್ರಶ್ನೆ ಎತ್ತಿದರು. ಈ ಹಿಂದೆ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಲಾಗುತ್ತಿತ್ತು ಎಂಬ ಮಾಹಿತಿ ಇದ್ದು, ಬಳಿಕ ಅದರ ಸ್ವರೂಪ ಬದಲಾಗಿದೆ ಎಂದು ಆರೋಪಿಸಿದರು.
ಬಂಗಲೆಯ ಒಳಭಾಗದಲ್ಲಿಯೂ ದುಬಾರಿ ವೆಚ್ಚದ ಕಾಮಗಾರಿಗಳು ನಡೆಯುತ್ತಿದ್ದು, ಇದಕ್ಕೆ ಅಗತ್ಯವಾದ ಅನುದಾನ ಯಾವ ಮೂಲದಿಂದ ಬಂದಿದೆ ಎಂಬ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಲಾಗಿದೆ ಎಂದು ಪ್ರತಿಭಾ ಕುಳಾಯಿ ಹೇಳಿದರು.
ಜಿಲ್ಲಾಧಿಕಾರಿಗಳು ಬಂಗಲೆಯ ಹೊರಭಾಗದಲ್ಲಿರುವ ನಾಮಫಲಕದಿಂದ ತಮ್ಮ ಪತ್ನಿಯ ಹೆಸರನ್ನು ಕೂಡಲೇ ತೆರವುಗೊಳಿಸಬೇಕು ಎಂದು ಪ್ರತಿಭಾ ಕುಳಾಯಿ ಆಗ್ರಹಿಸಿದರು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಈ ಕುರಿತು ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

