ಸೆ.5ರಂದು ಮಂಗಳೂರಿನಲ್ಲಿ ‘ರೈಸ್ ಆ್ಯಂಡ್ ರೆಕ್ಲೈಮ್’ ಮಹಿಳಾ ಸಮ್ಮೇಳನ

ಮಂಗಳೂರು: ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಹಾಗೂ ನಾಯಕತ್ವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ವಿಮೆನ್ ಇಂಡಿಯಾ ಮೂವ್‌ಮೆಂಟ್ ವತಿಯಿಂದ ಸೆ.5ರಂದು ಮಂಗಳೂರಿನ ಪುರಭವನದಲ್ಲಿ ‘ರೈಸ್ ಆ್ಯಂಡ್ ರೆಕ್ಲೈಮ್’ ಧ್ಯೇಯವಾಕ್ಯದಡಿ ಮಹಿಳಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಸದಸ್ಯೆ ಮಿಸ್ರಿಯಾ ಕಣ್ಣೂರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತವಾಗದೆ, ದೇಶದ ಭವಿಷ್ಯ ರೂಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ರಾಜಕೀಯ, ಆಡಳಿತ, ಆರ್ಥಿಕತೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ, ನ್ಯಾಯ ಮತ್ತು ಸೂಕ್ತ ಪ್ರಾತಿನಿಧ್ಯ ದೊರೆಯಬೇಕು ಎಂದರು.ಮಹಿಳೆಯರ ತಾಳ್ಮೆ ಮಿತಿಮೀರಿದರೆ ದೊಡ್ಡ ಕ್ರಾಂತಿಯೇ ನಡೆಯಲಿದೆ ಎಂದು ಅವರು ಹೇಳಿದರು.

ಮಹಿಳಾ ಹಕ್ಕುಗಳ ಕುರಿತು ಜಾಗೃತಿ, ಜವಾಬ್ದಾರಿಯ ಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಸಮ್ಮೇಳನದ ಉದ್ದೇಶವಾಗಿದೆ. ಶಿಕ್ಷಣ, ಉದ್ಯೋಗ, ಸುರಕ್ಷತೆ, ಆರೋಗ್ಯ, ಆರ್ಥಿಕ ಸ್ವಾವಲಂಬನೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಮಹಿಳೆಯರು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯ, ತಾರತಮ್ಯ, ಶೋಷಣೆ ಹಾಗೂ ಹಿಂಸೆಯ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ. ಯುವಜನರ ಭವಿಷ್ಯವನ್ನು ಹಾಳುಮಾಡುತ್ತಿರುವ ಮಾದಕ ವ್ಯಸನದ ವಿರುದ್ಧವೂ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಸುರಕ್ಷತೆ, ಸೈಬರ್ ಶೋಷಣೆ ಹಾಗೂ ಶಿಕ್ಷಣದಿಂದ ವಂಚನೆ ಸೇರಿದಂತೆ ವಿವಿಧ ಸಾಮಾಜಿಕ ಅನಿಷ್ಟಗಳ ವಿರುದ್ಧ ಮಹಿಳೆಯರು ಜಾಗೃತ ಸಮಾಜದ ಮುಂಚೂಣಿ ಶಕ್ತಿಯಾಗಬೇಕು ಎಂದು ಅವರು ತಿಳಿಸಿದರು.

ಸಮ್ಮೇಳನದಲ್ಲಿ ಬೆಂಗಳೂರಿನಿಂದ ಮಾಜಿ ಸಚಿವೆ ಬಿ.ಟಿ. ಲಲಿತಾ, ವಕೀಲರಾದ ಅರ್ಷಿತಾ, ನ್ಯಾಯವಾದಿ ಹಿನಾ ಹಾಗೂ ಮಮತಾ ಆನೆಕಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಮೆನ್ ಇಂಡಿಯಾ ಮೂವ್‌ಮೆಂಟ್ ಮಂಗಳೂರು ನಗರ ಜಿಲ್ಲಾಧ್ಯಕ್ಷೆ ಆಯಿಶಾ ಯಾಸ್ಮಿನ್, ಪ್ರಧಾನ ಕಾರ್ಯದರ್ಶಿ ಶಮೀಮಾ ತುಂಬೆ ಹಾಗೂ ಎಸ್‌ಡಿಪಿಐ ಜಿಲ್ಲಾ ಸದಸ್ಯೆ ಸಂಶಾದ್ ಅಬೂಬಕ್ಕರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!