ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಮಾಡಿದ ಆರೋಪಿಯನ್ನು ದಕ್ಷಿಣ ಕನ್ನಡದ ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 25.08.2026 ರ ಬೆಳಿಗ್ಗೆ ದೇವಸ್ಥಾನದ ಹೊರಗೆ ಇಟ್ಟಿದ್ದ ಕಾಣಿಕೆ ಡಬ್ಬಿ ಕಳ್ಳತನವಾಗಿತ್ತು. ಈ ಬಗ್ಗೆ ದೇವಸ್ಥಾನದಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ 24.08.2026 ರ ರಾತ್ರಿ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಎತ್ತಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

ಈ ಡಬ್ಬಿಯಲ್ಲಿ ಸುಮಾರು 4500 ರೂಪಾಯಿ ಹಣ ಇರುವ ಇತ್ತೆನ್ನಲಾಗಿತ್ತು. ಕಾಣಿಕೆ ಡಬ್ಬಿಯ ಮೌಲ್ಯ 2500 ರೂ ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 110-2026, ಕಲಂ: 305(e) ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.


ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ತನಿಖಾ ತಂಡವು ಕೇರಳದ ಕಿನ್ನಿಂಗಾರು, ಬದಿಯಡ್ಕ ,ಆದೂರು ಕಡೆಗಳಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಅಂತರ್ ರಾಜ್ಯ ಕಳ್ಳತನ ಮಾಡುವ ಆರೋಪಿಯಾದ ಕೇರಳ ಕಾಸರಗೋಡು ಸತೀಶ (31) ಎಂಬಾತನನ್ನು ಕೇರಳದ ಬದಿಯಡ್ಕ ಎಂಬಲ್ಲಿ ದಸ್ತಗಿರಿ ಮಾಡಿ, ಸದ್ರಿ ಆರೋಪಿತನಿಂದ ಕಳ್ಳತನ ಮಾಡಿದ ಕಾಣಿಕೆ ಡಬ್ಬಿ ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಅಂದಾಜು 1 ಲಕ್ಷ ರೂ ಮೌಲ್ಯದ ಬೈಕ್ ಸ್ವತ್ತುಗಳನ್ನು ಸ್ವಾಧೀನಪಡಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ, ಹಾಜರುಪಡಿಸಿದಾಗ ನ್ಯಾಯಾಲಯವು ಸದ್ರಿ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಈ ಆರೋಪಿಯ ಮೇಲೆ ಈಗಾಗಲೇ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳ್ಳತನ ಪ್ರಕರಣ ದಾಖಲಾಗಿದೆ.


