ಮಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಅಖಿಲ ಭಾರತ ತುಳು ಒಕ್ಕೂಟ (ರಿ.), ಮಂಗಳೂರು ಸರ್ಕಾರವನ್ನು ಒತ್ತಾಯಿಸಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, 1970ರಲ್ಲಿ ಎಸ್.ಆರ್. ಹೆಗ್ಡೆ ಅವರ ನೇತೃತ್ವದಲ್ಲಿ ಆರಂಭಗೊಂಡ ತುಳುಕೂಟ, ಕಳೆದ ಹಲವು ದಶಕಗಳಲ್ಲಿ ತುಳು ಭಾಷೆಯ ಬೆಳವಣಿಗೆ ಹಾಗೂ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದೆ. ಪ್ರಸ್ತುತ ದೇಶ-ವಿದೇಶಗಳಲ್ಲಿ ಸುಮಾರು 50 ಶಾಖೆಗಳನ್ನು ಹೊಂದಿದ್ದು, ತುಳು ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ತುಳು ಭಾಷೆ ಕೇವಲ ತುಳುವರ ಭಾಷೆಯಲ್ಲ. ಜಾತಿ, ಧರ್ಮ ಹಾಗೂ ಭಾಷೆಯ ಯಾವುದೇ ಭೇದವಿಲ್ಲದೆ ಕರ್ನಾಟಕದ ಎಲ್ಲರ ಭಾಷೆಯಾಗಿ ತುಳುವನ್ನು ಬೆಳೆಸುವ ಉದ್ದೇಶದಿಂದ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ದೊರಕಬೇಕು ಎಂಬುದು ದೇಶ-ವಿದೇಶಗಳಲ್ಲಿ ನೆಲೆಸಿರುವ ತುಳುವರ ಒಕ್ಕೊರಲಿನ ಆಶಯವಾಗಿದೆ ಎಂದು ಅವರು ಹೇಳಿದರು.
18 ಲಕ್ಷಕ್ಕೂ ಅಧಿಕ ಜನರ ಮಾತೃಭಾಷೆಯಾಗಿರುವ ತುಳು, ತುಳುನಾಡಿನ ಸಾಂಸ್ಕೃತಿಕ ಹಾಗೂ ವ್ಯಾವಹಾರಿಕ ಭಾಷೆಯಾಗಿದೆ. ಸಮೃದ್ಧ ಸಾಹಿತ್ಯ, ಪುರಾತನ ಶಾಸನಗಳು ಮತ್ತು ಸ್ವಂತ ಲಿಪಿಯನ್ನು ಹೊಂದಿದ್ದರೂ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದ ಮಾನ್ಯತೆ ಇನ್ನೂ ದೊರಕಿಲ್ಲ ಎಂದು ಅವರು ವಿಷಾದಿಸಿದರು.

ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ನಿರ್ಣಯಗಳು, ವಿವಿಧ ಸಂಘ-ಸಂಸ್ಥೆಗಳ ಮನವಿಗಳು ಹಾಗೂ ಡಾ. ಎಂ. ಮೋಹನ್ ಆಳ್ವ ನೇತೃತ್ವದ ಸಮಿತಿ ಸಲ್ಲಿಸಿದ ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಈ ಕುರಿತು ಶಾಸಕರು ಹಾಗೂ ಸಂಸದರು ಸದನದಲ್ಲೂ ಧ್ವನಿ ಎತ್ತಿದ್ದಾರೆ ಎಂದರು.
ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕರಾವಳಿಯ ಎಲ್ಲ ಶಾಸಕರು ಒಕ್ಕೊರಲಿನಿಂದ ಬೆಂಬಲ ನೀಡಬೇಕು ಎಂದು ಎ.ಸಿ. ಭಂಡಾರಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಯೋಗೀಶ್ ಶೆಟ್ಟಿ ಜೆಪ್ಪು, ಪಿ.ಎ. ಪೂಜಾರಿ, ಕದ್ರಿ ನವನೀತ ಶೆಟ್ಟಿ, ಗಂಗಾಧರ ಕಿದಿಯೂರು ಹಾಗೂ ತಾರನಾಥ ಉಪಸ್ಥಿತರಿದ್ದರು.


Totally unexpected win today! The odds are quite competitive compared to other sites I have tried. Big thanks to kirkiriya11.