ಮದ್ರಸಾದಲ್ಲಿ ಧಾರ್ಮಿಕ ಶಿಕ್ಷಣದ ವೇಳೆ ಪ್ರೀತಿ? ವಿವಾಹಿತ ಧರ್ಮಗುರು ಜೊತೆ ಯುವತಿ ತೆರಳಿದ್ದಕ್ಕೆ ಪೋಷಕರ ಆಕ್ರೋಶ!

ಮಂಗಳೂರು: ಈಗಾಗಲೇ ಮದುವೆಯಾಗಿ ಮಕ್ಕಳಿರುವ ಧರ್ಮಗುರು ಜೊತೆ 22 ವರ್ಷದ ಯುವತಿ ಮಂಗಳೂರಿಗೆ ಬಂದಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ.

ಮಂಗಳೂರಿನ ಅಸೈಗೋಳಿ ನಿವಾಸಿ 40 ವರ್ಷದ ಅಶ್ರಫ್ ಸ ಅದಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಗದುಮ್ಮ (22) ಕಳೆದ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಅಶ್ರಫ್ ಅವರು ಈ ಹಿಂದೆ ಕುಮಟಾದ ಮದ್ರಸಾವೊಂದರಲ್ಲಿ ಧರ್ಮಗುರುವಾಗಿ ಕೆಲಸ ಮಾಡುತ್ತಿದ್ದ ವೇಳೆ ಯುವತಿಯ ಪರಿಚಯವಾಗಿತ್ತು ಎಂದು ವರದಿಯಾಗಿದೆ. ಕಳೆದ ಅಕ್ಟೋಬರ್ 22ರಂದು ಯುವತಿಯನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಮಗಳನ್ನು ಹುಡುಕಿಕೊಂಡು ಮಂಗಳೂರಿಗೆ ಬಂದ ಪೋಷಕರು ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿದಾಗ, ಪೋಷಕರು ಮನೆಗೆ ಮರಳುವಂತೆ ಮನವಿ ಮಾಡಿದರೂ ಯುವತಿ ನಿರಾಕರಿಸಿದ್ದಾಳೆ ಎನ್ನಲಾಗಿದೆ.

ತಾನು ಅಶ್ರಫ್ ಅವರೊಂದಿಗೇ ತೆರಳುವುದಾಗಿ ಯುವತಿ ಪೊಲೀಸರಿಗೆ ತಿಳಿಸಿದ ಬಳಿಕ ಅವರೊಂದಿಗೆ ತೆರಳಿದ್ದಾಳೆ ಎಂದು ವರದಿಯಾಗಿದೆ. ಇದರಿಂದ ದುಃಖಿತರಾದ ಪೋಷಕರು ಪೊಲೀಸ್ ಠಾಣೆಯ ಆವರಣದಲ್ಲೇ ಕಣ್ಣೀರಿಟ್ಟಿದ್ದಾರೆ.

ಇನ್ನು, ಅಶ್ರಫ್ ಅವರು ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅವರನ್ನು ಸಮಾಜದಿಂದ ಬಹಿಷ್ಕರಿಸಬೇಕು ಹಾಗೂ ಯಾವುದೇ ಮದ್ರಸಾದಲ್ಲಿ ನೇಮಕ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಆದರೆ, ಕುಟುಂಬಸ್ಥರ ಆರೋಪಗಳ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!