MUDA ಹೊಸವಲಯ ನಿಯಮಾವಳಿಗಳಿಂದ ಜನಸಾಮಾನ್ಯರಿಗೆ ಅನ್ಯಾಯ: ಕೃಷ್ಣ ಜೆ. ಪಾಲೆಮಾರ್ ಆರೋಪ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಸರಕಾರಕ್ಕೆ ಸಲ್ಲಿಸಿರುವ ಸಮಗ್ರ ಅಭಿವೃದ್ಧಿ ಯೋಜನೆ (CDP) ಹಾಗೂ ಹೊಸವಲಯ ಕಟ್ಟಡ ನಿಯಮಾವಳಿಗಳಲ್ಲಿನ ಹಲವು ಅವೈಜ್ಞಾನಿಕ ನೀತಿಗಳಿಂದ ಸಾಮಾನ್ಯ ನಾಗರಿಕರು, ಮನೆ ನಿರ್ಮಾಣ ಮಾಡುವವರು ಹಾಗೂ ಅಭಿವೃದ್ಧಿದಾರರು ತೊಂದರೆ ಅನುಭವಿಸುವಂತಾಗಿದೆ. ಸಾರ್ವಜನಿಕರ ಹಿತಾಸಕ್ತಿ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಗಳನ್ನು ತಕ್ಷಣ ಮರುಪರಿಶೀಲಿಸಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ULMS ಆನ್‌ಲೈನ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳಿಂದ ಸಣ್ಣ ನಿವೇಶನಗಳಲ್ಲಿ ಮನೆ ನಿರ್ಮಿಸಲು ಪರವಾನಗಿ ಪಡೆಯುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಪದೇಪದೇ OTP ಪರಿಶೀಲನೆ, ಅವಧಿ ಮುಗಿಯುವ ಸಮಸ್ಯೆ, ದಾಖಲೆಗಳ ಅಪ್‌ಲೋಡ್ ತೊಂದರೆ, ವಾರ್ಡ್ ಗುರುತಿಸುವಿಕೆ ಹಾಗೂ ತಾಂತ್ರಿಕ ನೆರವಿನ ಕೊರತೆಯಿಂದ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ. 500 ಚದರ ಮೀಟರ್‌ಗಿಂತ ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ಆನ್‌ಲೈನ್ ವ್ಯವಸ್ಥೆ ಕಡ್ಡಾಯವಾಗಿದ್ದರೆ, ಅದಕ್ಕಿಂತ ಹೆಚ್ಚಿನ ಕಟ್ಟಡಗಳಿಗೆ ಆಫ್‌ಲೈನ್ ವ್ಯವಸ್ಥೆಯಲ್ಲಿ ತ್ವರಿತ ಅನುಮತಿ ನೀಡುತ್ತಿರುವುದು ತಾರತಮ್ಯಕ್ಕೆ ಕಾರಣವಾಗಿದೆ ಎಂದು ದೂರಿದರು.

ಹೊಸವಲಯ ನಿಯಮಾವಳಿಯ 6.9.8ರ ಟೆಲಿಸ್ಕೋಪಿಕ್ ಸೆಟ್‌ಬ್ಯಾಕ್ ನಿಯಮದ ಪ್ರಕಾರ ಏಳು ಅಂತಸ್ತಿನ ಕಟ್ಟಡಕ್ಕೆ ಒಂದು ಮೀಟರ್ ಸೆಟ್‌ಬ್ಯಾಕ್ ಇದ್ದರೆ, ಎರಡು ಅಂತಸ್ತಿನ ಸಾಮಾನ್ಯ ಮನೆಗೆ 1.5 ಮೀಟರ್ ಸೆಟ್‌ಬ್ಯಾಕ್ ನಿಗದಿಪಡಿಸಲಾಗಿದೆ. ಇಂತಹ ನಿಯಮದಿಂದ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿಶಾಮಕ ವಾಹನಗಳ ಪ್ರವೇಶಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಈ ನಿಯಮವನ್ನು ರದ್ದುಗೊಳಿಸಿ, ಅಗ್ನಿಶಾಮಕ ಇಲಾಖೆ ಮತ್ತು ತಜ್ಞರ ಅಭಿಪ್ರಾಯದೊಂದಿಗೆ ಸುರಕ್ಷಿತ ಮಾನದಂಡ ರೂಪಿಸಬೇಕು ಎಂದು ಒತ್ತಾಯಿಸಿದರು.

ಹಿಂದಿನ CDPಯಲ್ಲಿ 6 ಮತ್ತು 7.5 ಮೀಟರ್ ರಸ್ತೆಗಳಿಗೆ ಜಾಗ ಬಿಟ್ಟುಕೊಟ್ಟ ಭೂಮಾಲೀಕರಿಗೆ ನೀಡಲಾಗುತ್ತಿದ್ದ TDR ಹಾಗೂ ಪ್ರೀಮಿಯಂ FAR ಸೌಲಭ್ಯಗಳನ್ನು ಹೊಸ ನಿಯಮಾವಳಿಯಲ್ಲಿ ಕೈಬಿಟ್ಟಿರುವುದರಿಂದ ರಸ್ತೆ ಅಭಿವೃದ್ಧಿಗೆ ಜಾಗ ನೀಡಿದವರಿಗೆ ಅನ್ಯಾಯವಾಗಿದೆ. ಈ ಸೌಲಭ್ಯಗಳನ್ನು ಮರುಸ್ಥಾಪಿಸಬೇಕು. ಹಿಂದೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಸ್ತೆಗಾಗಿ ಜಾಗ ಬಿಟ್ಟುಕೊಡುತ್ತಿದ್ದರು. ಈಗ ಇಂತಹ ಪ್ರೋತ್ಸಾಹ ಇಲ್ಲದಿರುವುದರಿಂದ ರಸ್ತೆ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು.

ಹೋಟೆಲ್‌ಗಳು, ಸರ್ವಿಸ್ ಅಪಾರ್ಟ್‌ಮೆಂಟ್‌ಗಳು, ವಸತಿಗೃಹಗಳು ಹಾಗೂ ಪ್ರಾಥಮಿಕ ಶಾಲೆಗಳಂತಹ ಕಟ್ಟಡಗಳಿಗೆ 12 ಮೀಟರ್ ರಸ್ತೆ ಕಡ್ಡಾಯಗೊಳಿಸಿರುವುದು ಮಂಗಳೂರಿನ ಭೌಗೋಳಿಕ ಪರಿಸ್ಥಿತಿಗೆ ಸೂಕ್ತವಲ್ಲ. ಈಗಾಗಲೇ 6 ಮೀಟರ್ ಅಥವಾ ಅದಕ್ಕಿಂತ ಕಡಿಮೆ ಅಗಲದ ರಸ್ತೆಗಳಿರುವ ಪ್ರದೇಶಗಳಲ್ಲಿ ಶಾಲೆ, ದೇವಸ್ಥಾನ, ಚರ್ಚ್, ಮಸೀದಿ ಹಾಗೂ ದೈವಸ್ಥಾನಗಳ ನಿರ್ವಹಣೆ ಮತ್ತು ವಿಸ್ತರಣೆಗೆ ತೊಂದರೆಯಾಗಬಹುದು. ಹೀಗಾಗಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.

ಲೇಔಟ್ ಅನುಮೋದನೆಗೆ PWD, ಮಹಾನಗರ ಪಾಲಿಕೆ, ಒಳಚರಂಡಿ ಮತ್ತು ವಿದ್ಯುತ್ ಇಲಾಖೆಗಳ ಅನುಮತಿ ಪಡೆಯಲು ಎರಡು-ಮೂರು ವರ್ಷಗಳವರೆಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ. ಎಲ್ಲ ಇಲಾಖೆಗಳ NOCಗಳನ್ನು ಪ್ರಾಧಿಕಾರದ ಮೂಲಕವೇ ಪಡೆಯುವ ವ್ಯವಸ್ಥೆ ರೂಪಿಸಿ ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಲೇಔಟ್ ಅನುಮೋದನೆ ವಿಳಂಬದಿಂದ ನಿವೇಶನಗಳ ಪೂರೈಕೆ ಕುಂಠಿತವಾಗಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದರು.

CDPಯಲ್ಲಿ ಪ್ರಸ್ತಾಪಿಸಿರುವ ಮಂಗಳಾ ಕಾರ್ನಿಷ್ ರಸ್ತೆಯ ಜೋಡಣೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅವರು, ಈಗಾಗಲೇ ಜನವಸತಿ ಇರುವ ಪ್ರದೇಶಗಳಲ್ಲಿ ಹಾಗೂ ರಸ್ತೆ ಸಂಪರ್ಕವೇ ಇಲ್ಲದ ಕಡೆಗಳಲ್ಲಿ ರಸ್ತೆ ಪ್ರಸ್ತಾಪಿಸಿರುವುದರಿಂದ ಮನೆ ನಿರ್ಮಾಣ ಮತ್ತು ಏಕ ನಿವೇಶನ ಅನುಮೋದನೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದರು. ಹಲವು ಕಡೆ ಅವೈಜ್ಞಾನಿಕ ರಸ್ತೆ ಅಗಲೀಕರಣ ಮತ್ತು ರಸ್ತೆ ಪಥ ಬದಲಾವಣೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವು ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಂತಹ ಬದಲಾವಣೆಗಳನ್ನು ಮಾಡಲಾಗಿದೆಯೇ ಎಂಬ ಅನುಮಾನವಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರತಿ ಹತ್ತು ವರ್ಷಗಳಿಗೊಮ್ಮೆ CDP ಪರಿಷ್ಕರಣೆಯಾಗಬೇಕಿದ್ದರೂ, ಸುಮಾರು 20 ವರ್ಷಗಳಿಂದ ಸಮಗ್ರ ಪರಿಷ್ಕರಣೆ ನಡೆದಿಲ್ಲ. ನಗರಾಭಿವೃದ್ಧಿ ಎಂದರೆ ಕಟ್ಟಡಗಳ ಎತ್ತರ ಹೆಚ್ಚಿಸುವುದಷ್ಟೇ ಅಲ್ಲ; ಜನರ ಸುರಕ್ಷತೆ, ಮನೆ ನಿರ್ಮಾಣದ ಹಕ್ಕು, ರಸ್ತೆಗಾಗಿ ಜಮೀನು ಬಿಟ್ಟವರಿಗೆ ನ್ಯಾಯ ಹಾಗೂ ಕೈಗೆಟುಕುವ ನಿವೇಶನಗಳ ಲಭ್ಯತೆಯನ್ನೂ ಖಚಿತಪಡಿಸಬೇಕು. ಮಂಗಳೂರಿನ ಜನರ ಹಿತದೃಷ್ಟಿಯಿಂದ ಹೊಸವಲಯ ನಿಯಮಾವಳಿಗಳನ್ನು ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಕೃಷ್ಣ ಜೆ. ಪಾಲೆಮಾರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಂಜಿನಿಯರ್ ಸಂಘದ ಅಧ್ಯಕ್ಷರಾದ ಇಂಜಿನಿಯರ್ ಐ ಯೋಗೀಶ್ ಪೈ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!