ತನ್ನ ನೋವಿನಿಂದ ಬಡವರ ಬದುಕಿಗೆ ಬೆಳಕಾದ ಔಫ್ ಕಸಬ್; ಸೀತಾಂಗೋಳಿಯಲ್ಲಿ ಉಚಿತ ಡಯಾಲಿಸಿಸ್ ಸೇವೆ

ಸ್ವಂತ ಜೀವನದಲ್ಲಿ ಎದುರಿಸಿದ ಕಿಡ್ನಿ ಕಾಯಿಲೆಯ ನೋವು ಹಾಗೂ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಭೇಟಿಯಾದ ಹಲವಾರು ರೋಗಿಗಳ ಸಂಕಷ್ಟಗಳು ಔಫ್ ಕಸಬ್ ಅವರನ್ನು ಒಂದು ಸಾಮಾಜಿಕ ಸೇವೆಯತ್ತ ಕರೆದೊಯ್ದಿವೆ. ಮೊಗ್ರಾಲ್ ಪುತ್ತೂರು ಕುನ್ನಿಲ್ ನಿವಾಸಿ ಔಫ್ ಕಸಬ್ ಅವರು ತಮ್ಮ ನೋವಿನಿಂದ ಇತರರ ಬದುಕಿನ ಹೋರಾಟದತ್ತ ಹೆಜ್ಜೆ ಹಾಕಿದ್ದಾರೆ. ಸೀತಾಂಗೋಳಿಯ ಉಚಿತ ಡಯಾಲಿಸಿಸ್ ಕೇಂದ್ರದ ಹಿಂದಿರುವ ಪ್ರಮುಖ ವ್ಯಕ್ತಿಯೇ ಪುತ್ತೂರು ಕುನ್ನಿಲ್ ನಿವಾಸಿ ಔಫ್ ಕಸಬ್.

ಬಡ ಕಿಡ್ನಿ ರೋಗಿಗಳಿಗಾಗಿ ‘ಅದಿ ಜೀವನ’ ಎಂಬ ಹೆಸರಿನಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಹಲವು ವರ್ಷಗಳ ಕಾಲ ದುಬೈನಲ್ಲಿ ವಿದೇಶಿ ಉದ್ಯೋಗದಲ್ಲಿದ್ದ ಔಫ್ ಅವರಿಗೆ ಕಿಡ್ನಿ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಮ್ಮ ವಿದೇಶಿ ಜೀವನವನ್ನು ಕೊನೆಗೊಳಿಸಿ ಊರಿಗೆ ಮರಳಬೇಕಾಯಿತು. ನಿರಂತರ ಚಿಕಿತ್ಸೆಯ ಬಳಿಕ ಅವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಯಿತು. ನಂತರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೂ ಒಳಗಾದರು.

ಚಿಕಿತ್ಸೆಯ ಭಾಗವಾಗಿ ವಿವಿಧ ಡಯಾಲಿಸಿಸ್ ಕೇಂದ್ರಗಳು ಹಾಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಹಲವಾರು ರೋಗಿಗಳ ಸಂಕಷ್ಟವನ್ನು ಔಫ್ ನೇರವಾಗಿ ಅರಿತುಕೊಂಡರು. ಒಂದು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಕೂಡ ಹಣವಿಲ್ಲದೆ ಪರದಾಡುತ್ತಿದ್ದ ರೋಗಿಗಳ ಸ್ಥಿತಿ ಅವರ ಮನಸ್ಸಿಗೆ ತೀವ್ರ ನೋವುಂಟು ಮಾಡಿತು. ಅಲ್ಲಿಂದಲೇ ಬಡ ಡಯಾಲಿಸಿಸ್ ರೋಗಿಗಳಿಗಾಗಿ ಏನಾದರೂ ಮಾಡಬೇಕು ಎಂಬ ಆಲೋಚನೆ ಮೂಡಿತು.

ಹೀಗೆ ಸೀತಾಂಗೋಳಿಯಲ್ಲಿ ‘ಅತಿಜೀವನ’ ಎಂಬ ಹೆಸರಿನಲ್ಲಿ ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ವಿವಿಧ ಪಂಚಾಯಿತಿಗಳಿಂದ ಬರುವ ರೋಗಿಗಳಿಗೆ ಸುಲಭವಾಗಿ ತಲುಪಲು ಸಾಧ್ಯವಾಗುವ ಸ್ಥಳ ಎಂಬ ಕಾರಣಕ್ಕೆ ಸೀತಾಂಗೋಳಿಯನ್ನು ಆಯ್ಕೆ ಮಾಡಲಾಯಿತು. ದೂರ ಪ್ರಯಾಣದ ತೊಂದರೆ ಹಾಗೂ ಪ್ರಯಾಣ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ, ಆಸ್ಪತ್ರೆಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶವೂ ಇದರ ಹಿಂದಿತ್ತು.

ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಅಊಫ್ ಈ ಸೇವಾ ಕಾರ್ಯಕ್ಕೆ ಆರಂಭದಲ್ಲಿ ಚಾಲನೆ ನೀಡಿದರು. ಎರಡು ಡಯಾಲಿಸಿಸ್ ಯಂತ್ರಗಳೊಂದಿಗೆ ಕಾರ್ಯಾರಂಭಿಸಿದ ಕೇಂದ್ರವು ನಂತರ ಟ್ರಸ್ಟ್ ರಚನೆಯ ಮೂಲಕ ತನ್ನ ಸೇವೆಯನ್ನು ವಿಸ್ತರಿಸಿತು. ಪ್ರಸ್ತುತ ಇಲ್ಲಿ ಸುಮಾರು ಏಳು ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಾಡಿಗೆ ಕಟ್ಟಡದಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇಲ್ಲಿ 12 ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪಿಸಲು ಅಗತ್ಯವಿರುವ ಮೂಲಸೌಕರ್ಯವನ್ನು ಸಿದ್ಧಪಡಿಸಲಾಗಿದೆ. ಆದರೆ ಸಂಸ್ಥೆಯ ದೈನಂದಿನ ಕಾರ್ಯಾಚರಣೆಯ ವೆಚ್ಚವನ್ನು ಭರಿಸುವುದು ದೊಡ್ಡ ಸವಾಲಾಗಿ ಮುಂದುವರಿದಿದೆ.

ಪ್ರತಿ ತಿಂಗಳು ಸುಮಾರು 1.80 ಲಕ್ಷ ರೂ. ವೆಚ್ಚವಾಗುತ್ತಿದ್ದರೂ, ರೋಗಿಗಳಿಂದ ಒಂದು ರೂಪಾಯಿಯನ್ನೂ ಪಡೆಯಲಾಗುತ್ತಿಲ್ಲ.

ಸೀತಾಂಗೋಳಿ ಬಸ್ ನಿಲ್ದಾಣದ ಸಮೀಪ ಆರಂಭಗೊಂಡಿರುವ ಈ ಕೇಂದ್ರಕ್ಕೆ ಆರು ವರ್ಷಗಳ ಸೇವಾ ಪರಂಪರೆಯಿದೆ. ಕಾರ್ಯಾರಂಭಿಸಿದ ಎರಡು ವರ್ಷಗಳ ಬಳಿಕ ಟ್ರಸ್ಟ್ ರಚಿಸಲಾಯಿತು. ಟ್ರಸ್ಟ್ ರಚನೆಯಾಗಿ ಸುಮಾರು ನಾಲ್ಕು ವರ್ಷಗಳಾಗಿವೆ.

ಜಾತಿ-ಮತ ಭೇದವಿಲ್ಲದೆ ಅರ್ಹರಾದ ಎಲ್ಲರಿಗೂ ಇಲ್ಲಿ ಉಚಿತ ಡಯಾಲಿಸಿಸ್ ಸೇವೆ ಲಭ್ಯವಿದೆ. ಹಾಸಿಗೆ ಖಾಲಿ ಇದ್ದಲ್ಲಿ ರೋಗಿಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಸೇವೆ ನೀಡಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದವರಿಗೆ ಆದ್ಯತೆ ನೀಡಲಾಗುತ್ತಿದೆ.

ಈ ಕರುಣೆಯ ಸೇವಾ ಕಾರ್ಯಕ್ಕೆ ಪ್ರಮುಖ ಸವಾಲಾಗಿ ಉಳಿದಿರುವುದು ಆರ್ಥಿಕ ಸಮಸ್ಯೆಯೇ ಎಂದು ಔಫ್ ಹೇಳುತ್ತಾರೆ.

SHARE
Loading spinner

One thought on “ತನ್ನ ನೋವಿನಿಂದ ಬಡವರ ಬದುಕಿಗೆ ಬೆಳಕಾದ ಔಫ್ ಕಸಬ್; ಸೀತಾಂಗೋಳಿಯಲ್ಲಿ ಉಚಿತ ಡಯಾಲಿಸಿಸ್ ಸೇವೆ

Leave a Reply

Your email address will not be published. Required fields are marked *

error: Content is protected !!