ಕಾಸರಗೋಡು : ಅಪಹರಣ ಪ್ರಕರಣದ ಆರೋಪಿಗಳನ್ನು ಭೇಟಿಯಾಗಲು ಬಂದಿದ್ದ ತಾಯಿ ಮತ್ತು ಮಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕಾಸರಗೋಡು ನಗರ ಠಾಣೆಯ ಎಸ್‌ಐ ಟಿ.ಪಿ. ಸೈಫುದ್ದೀನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.ಕಣ್ಣೂರು ಡಿಐಜಿ ಕೆ. ಕಾರ್ತಿಕ್ ಈ ಆದೇಶ ಹೊರಡಿಸಿದ್ದಾರೆ.

ಠಾಣೆಗೆ ಬಂದಿದ್ದ ತಾಯಿ-ಮಗಳು ಆರೋಪಿಯನ್ನು ಬಿಡುಗಡೆಗೊಳಿಸುವಂತೆ ಗಲಾಟೆ ಸೃಷ್ಟಿಸಿದ್ದರೆನ್ನಲಾಗಿದೆ. ಈ ವೇಳೆ ಯುವತಿ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದಿದ್ದಕ್ಕೆ ಆಕ್ರೋಶಗೊಂಡ ಎಸ್‌ಐ, ಮಹಿಳಾ ಸಿಬ್ಬಂದಿ ಸಹಾಯದಿಂದ ಅವರನ್ನು ಹೊರಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿತ್ತು.

ಈ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ರಾಜ್ ಅವರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಪ್ರಾಥಮಿಕ ವರದಿ ಸಲ್ಲಿಸಿದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಗಾಗಿ ಕಾಸರಗೋಡು ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಅವರನ್ನು ವಿಶೇಷಾಧಿಕಾರಿಯಾಗಿ ನೇಮಿಸಲಾಗಿದೆ.

