ಮಂಗಳೂರು:ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ(ನೋಂ) ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ (ನೋಂ) ಸಂಘಟನೆಗಳ ಮುಖ್ಯಸ್ಥರು ಬುದ್ದಿಮಾಂದ್ಯತೆ, ಆಟಿಸಂ, ಮೆದುಳಿನ ಪಾಶ್ವ, ಬಹುವಿಧ ನ್ಯೂನತೆ, ನಿರ್ದಿಷ್ಟ ಕಲಿಕೆಯ ಸಮಸ್ಯೆ, ಶ್ರವಣ ದೋಷ ಹಾಗೂ ದೃಷ್ಟಿ ಮಾಂದ್ಯತೆ ಇರುವ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಸರಕಾರದಿಂದ ಸೂಕ್ತ ಸ್ಪಂದನೆ, ಹಾಗೂ ಕ್ಲಪ್ತ ಸಮಯಕ್ಕೆ ಅನುದಾನ ಬಾರದೆ ಸಮಸ್ಯೆಯನ್ನು ಈ ಶಾಲೆಗಳು ಎದುರಿಸುತ್ತಿದ್ದು ಈ ಬಗ್ಗೆ ಸರಕಾರ ಕೋರಿಕೆಗೆ ಈಡೇರಿಸಬೇಕ್ಕೆನ್ನುವ ಉದ್ದೇಶದಿಂದ ಜನವರಿ 28 ರಂದು ರಾಜ್ಯದ ವಿಶೇಷ ಶಾಲಾ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದೆಂದು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ ವಸಂತ್ ಕುಮಾರ್ ಶೆಟ್ಟಿ ತಿಳಿಸಿದರು .
ಅವರು ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಮುಷ್ಕರದಲ್ಲಿ ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಯಾವುದೇ ಅನುದಾನ ದೊರಕದೆ ಇರುವ 25 ವರ್ಷ ಮೀರಿದ ವಯಸ್ಕ ಬುದ್ಧಿಮಾಂದ್ಯ ಯುವಕ-ಯುವತಿಯರು ಹಾಗೂ ಅವರ ಹೆತ್ತವರು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು .
ನಮ್ಮ ಪ್ರಮುಖ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ” ಎಂಬ ಸಾಂವಿಧಾನಿಕ ಆಶಯದಂತೆ ಶಿಶು ಕೇಂದ್ರಿಕೃತ ಅನುದಾನ ಪಡೆಯುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ 1982 ಅನುದಾನದಡಿಯಲ್ಲಿ ಬರುವ ಸಿಬ್ಬಂದಿಗಳಿಗೆ ದೊರಕುವ ಎಲ್ಲಾ ಸೌಲಭ್ಯಗಳನ್ನು ಜಾರಿ, ವಿಧಾನ ಸಭಾಧ್ಯಕ್ಷರ ನೇತೃತ್ವದಲ್ಲಿ 2 ಪ್ರಮುಖ ಸಭೆಗಳು ನಡೆದು ಅದರ ಆದೇಶದಂತೆ ಇಲಾಖಾ ನಿರ್ದೇಶಕರು ರಾಜ್ಯದ ವಿಶೇಷ ಶಾಲೆಗಳ ಅನುದಾನವನ್ನು 40% ಏರಿಕೆ ಮಾಡಿ ಸರಕಾರಕ್ಕೆ ನೀಡಿರುವ ಪ್ರಸ್ತಾವನೆಯನ್ನು ಈ ಕೂಡಲೇ ಮಂಜೂರು , ಸವೋಚ್ಚ ನ್ಯಾಯಲಯ ನೀಡಿರುವ ಆದೇಶದ ಪ್ರಕಾರ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಸೇರಿದಂತೆ ಕೆಲವಾರು ಮಹತ್ವದ ಬೇಡಿಕೆಯನ್ನು ಈಡೇರಿಸಬೇಕ್ಕೆಂದು ಸರಕಾರಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸಾನಿಧ್ಯ ವಿಶೇಷ ಶಾಲೆಯ ಅಧ್ಯಕ್ಷರಾದ ಮಹಾಬಲ ಮಾರ್ಲ , ಚೇತನ ವಿಶೇಷ ಶಾಲೆಯ ಮುಖ್ಯಸ್ಥರಾದ ವಿನೋದ್ ಶೆಣೈ ಉಪಸ್ಥಿತರಿದ್ದರು .