ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡಿನಲ್ಲಿ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿತು. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಭೂಮಿಪೂಜೆ ಕಾರ್ಯಕ್ರಮವು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಅಗತ್ಯವಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು ಎಂದು ಹೇಳಿದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅನುದಾನಗಳಿಗೆ ತಡೆ ನೀಡಿದ ಪರಿಣಾಮ ಹಲವು ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದವು ಎಂದರು.
ಇದೀಗ ಹಲವು ಬಾರಿ ಮನವಿ ಮಾಡಿದ ನಂತರ ತಡೆಹಿಡಿಯಲಾಗಿದ್ದ ಅನುದಾನಗಳನ್ನು ಮತ್ತೆ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯ ಶೈಲೇಶ್ ಬಿ. ಶೆಟ್ಟಿ, ಹಿರಿಯ ಕಾರ್ಯಕರ್ತರಾದ ಪುಂಡಲೀಕ ಸುವರ್ಣ, ದೇವದಾಸ್ ಶೆಟ್ಟಿ, ಚಂದ್ರಹಾಸ್ ಕೊಟ್ಟಾರಿ, ವಾರ್ಡ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬೂತ್ ಅಧ್ಯಕ್ಷರಾದ ಗಣೇಶ್ ಕೊಟ್ಟಾರಿ, ಪ್ರಮೋದ್ ಕೊಟ್ಟಾರಿ, ದಿನೇಶ್ ಕುಲಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.