ಎರಡು ವರ್ಷಗಳಿಂದ ಆತಂಕ ಸೃಷ್ಟಿಸಿದ್ದ ಹುಲಿ ಬೋನಿಗೆ ಬಿತ್ತು; ಗ್ರಾಮಸ್ಥರ ನಿಟ್ಟುಸಿರು

ಹುಣಸೂರು: ಕಳೆದ ಎರಡು ವರ್ಷಗಳಿಂದ ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಸೃಷ್ಟಿಸಿದ್ದ ಹೆಣ್ಣು ಹುಲಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿರುವ ಘಟನೆ ಹನಗೋಡು ಹೋಬಳಿಯ ಕೂಡ್ಲೂರು ಸಮೀಪ ನಡೆದಿದೆ.

ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರಿಗೆ ಸೇರಿದ ತೋಟದಲ್ಲಿ ಅಳವಡಿಸಲಾಗಿದ್ದ ಬೋನಿನಲ್ಲಿ ಬುಧವಾರ ಮುಂಜಾನೆ ಸುಮಾರು 3ರಿಂದ 4 ವರ್ಷ ವಯಸ್ಸಿನ ಹೆಣ್ಣು ಹುಲಿ ಸೆರೆಯಾಗಿದೆ. ಹುಲಿ ಬಂಧನದಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದ ಹುಲಿ ಹತ್ತಾರು ಜಾನುವಾರುಗಳನ್ನು ಬೇಟೆಯಾಡಿದ್ದು, ರೈತರು ಹಾಗೂ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಬಳಿಕ ಹೊರ ಸಂಚಾರವನ್ನೇ ಜನರು ಕಡಿಮೆ ಮಾಡಿದ್ದರು. ಹುಲಿಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಹಾಗೂ ಮಾಜಿ ಶಾಸಕ ಮಂಜುನಾಥ್ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.

ಹುಲಿ ಸೆರೆಗಾಗಿ ತಿಂಗಳ ಹಿಂದೆ ತೋಟದಲ್ಲಿ ಬೋನು ಅಳವಡಿಸಿ ಅದರೊಳಗೆ ಮೇಕೆಯೊಂದನ್ನು ಕಟ್ಟಿ ಹಾಕಲಾಗಿತ್ತು. ಬುಧವಾರ ಬೆಳಗಿನ ಜಾವ ಮೇಕೆಯನ್ನು ಬೇಟೆಯಾಡಲು ಬಂದ ಹುಲಿ ಬೋನಿನೊಳಗೆ ಸಿಲುಕಿ ಬಂಧಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಆರ್.ಟಿ. ಕಿರುಬನಂತನ್ ಹಾಗೂ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಸಂತೋಷ್ ಹೂಗಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಜನರನ್ನು ನಿಯಂತ್ರಿಸಿತು.

ನಾಗರಹೊಳೆ ಅರಣ್ಯ ವಿಭಾಗದ ಪಶುವೈದ್ಯ ಡಾ. ರಮೇಶ್ ಅವರು ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಬೋನಿನಿಂದ ಹೊರತೆಗೆದು ಆರೋಗ್ಯ ತಪಾಸಣೆ ನಡೆಸಿದರು. ನಂತರ ಹುಲಿಯನ್ನು ಸುರಕ್ಷಿತವಾಗಿ ವಾಹನದಲ್ಲಿ ಸಾಗಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!