ಕೊಡಂಗಲ್ಲು, ಜೂನ್ 18: ಧರ್ಮಸ್ಥಳ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಆಸಕ್ತರಿಗಾಗಿ ಮಾಹಿತಿ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡಂಗಲ್ಲು ಇಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸ್ಪಾರ್ಕ್ ಅಕಾಡೆಮಿಯ ತರಬೇತುದಾರ ಹಾಗೂ ಹಿರಿಯ ಪತ್ರಕರ್ತ ರಾಯಿ ರಾಜ ಕುಮಾರ ಭಾಗವಹಿಸಿ ಮಾತನಾಡಿದರು. ಶಿಕ್ಷಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸುರಕ್ಷಿತ ಹಾಗೂ ನೈತಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಮನೆ ಹಾಗೂ ಶಾಲೆಯಲ್ಲಿನ ಪ್ರತಿಯೊಂದು ಕಾರ್ಯವನ್ನೂ ಸೃಜನಶೀಲವಾಗಿ ಕಲಿಯುವ ಮೂಲಕ ಮಕ್ಕಳ ಕಲ್ಪನಾಶಕ್ತಿ ವೃದ್ಧಿಯಾಗುವುದರ ಜೊತೆಗೆ ಜ್ಞಾನಾರ್ಜನೆಗೆ ದಾರಿಯಾಗುತ್ತದೆ ಎಂದು ಅವರು ಹಲವು ಉದಾಹರಣೆಗಳ ಮೂಲಕ ವಿವರಿಸಿದರು. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸಲು ಪೋಷಕರು ಪ್ರೀತಿ ಮತ್ತು ವಿಶ್ವಾಸದ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹದಿಹರೆಯದ ಮಕ್ಕಳಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಕುರಿತು ಗೆಳತಿ ವಿಭಾಗದ ಯೋಜನಾಧಿಕಾರಿ ಸುಮಿತ್ರ ಜೈನ್ ಮಾಹಿತಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಸೆಲಿನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಹರಿಣಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜ್ಞಾನ ವಿಕಾಸ ತಾಲ್ಲೂಕು ಸಮನ್ವಯಾಧಿಕಾರಿ ವಿನುತಾ ಸ್ವಾಗತಿಸಿದರು. ಶಿಕ್ಷಕಿ ರತ್ನ ಕಾರ್ಯಕ್ರಮ ನಿರೂಪಿಸಿದರು.