ಕಾಸರಗೋಡು : ಹತ್ತು ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿದ ಯುಡಿಎಫ್ ಸರ್ಕಾರ, ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ನೇತೃತ್ವದಲ್ಲಿ ಮಹತ್ವಾಕಾಂಕ್ಷೆಯ ಚೊಚ್ಚಲ ಬಜೆಟ್ ಮಂಡಿಸಿದೆ. ರಾಜ್ಯದ ಹಿಂದುಳಿದ ಜಿಲ್ಲೆಗಳಾದ ಕಾಸರಗೋಡು, ವಯನಾಡು ಮತ್ತು ಇಡುಕ್ಕಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.
ವಿಶೇಷವಾಗಿ ಕಾಸರಗೋಡಿನ ಎಂಡೋಸಲ್ಫಾನ್ ಸಂತ್ರಸ್ತರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿದ್ದು, ವೈದ್ಯಕೀಯ ಕಾಲೇಜು ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಸಾಮಾಜಿಕ ಭದ್ರತೆಗೆ ಒತ್ತು ನೀಡಿದ ಬಜೆಟ್ನಲ್ಲಿ, ‘ಉಮ್ಮನ್ ಚಾಂಡಿ ಆರೋಗ್ಯ ವಿಮೆ’ ಅಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 25 ಲಕ್ಷ ರೂ.ಗಳ ವಿಮೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಉದ್ಯೋಗ ಖಾತರಿ ಯೋಜನೆಗೆ 1,422 ಕೋಟಿ ರೂ., ‘ಮಿಷನ್ ಸಮುದ್ರ’ಕ್ಕೆ 400 ಕೋಟಿ ರೂ. ಹಾಗೂ ಏವಿಯೇಶನ್ ಹಬ್ ನಿರ್ಮಾಣಕ್ಕೆ 200 ಕೋಟಿ ರೂ. ಮೀಸಲಿಡಲಾಗಿದೆ.
ಸಾರಿಗೆ ರಂಗಕ್ಕೆ ಉತ್ತೇಜನ ನೀಡಲು ಖಾಸಗಿ ಹಾಗೂ ಟೂರಿಸ್ಟ್ ಬಸ್ಗಳ ತೆರಿಗೆಯಲ್ಲಿ ಶೇ. 50ರಷ್ಟು ರಿಯಾಯಿತಿ ಘೋಷಿಸಿರುವುದು ಬಜೆಟ್ನ ಪ್ರಮುಖ ಆಕರ್ಷಣೆಯಾಗಿದೆ.