ಬೆಂಗಳೂರು, ಜೂನ್ 20: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಮೂಲಕ ಹೆಚ್ಚಿನ ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೂಡಿಕೆದಾರರಿಗೆ ಸುಗಮ ಮತ್ತು ಸರಳವಾದ ವ್ಯವಸ್ಥೆ ಕಲ್ಪಿಸಬೇಕು. ಉದ್ಯಮಿಗಳು ವಿವಿಧ ಇಲಾಖೆಗಳ ಅನುಮತಿಗಳನ್ನು ಪಡೆಯುವ ಸಂದರ್ಭದಲ್ಲಿ ಎದುರಿಸುತ್ತಿರುವ ಕಿರಿಕಿರಿ ಹಾಗೂ ತಾಂತ್ರಿಕ ಅಡೆತಡೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಖಡಕ್ ಸೂಚನೆ ನೀಡಿದರು.
ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿಗಳನ್ನು ಒಂದೇ ವೇದಿಕೆಯ ಮೂಲಕ ಪಡೆಯಲು ಏಕ ಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆ ಜಾರಿಗೊಳಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ 718.63 ಕೋಟಿ ರೂಪಾಯಿ ಅಂದಾಜು ಹೂಡಿಕೆಯ 45 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ ಸುಮಾರು 4,500 ಉದ್ಯೋಗಗಳು ಸೃಷ್ಟಿಯಾಗಲಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಕರ್ನಾಟಕವು ದೇಶದ ಅತಿ ಉದ್ದದ ಸಮುದ್ರ ತೀರ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದ್ದು, ಕರಾವಳಿಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು. ಆದರೆ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಕರಾವಳಿ ಸಂಸ್ಕೃತಿ, ಆಚರಣೆಗಳು, ಪರಂಪರೆ ಹಾಗೂ ಜನಜೀವನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕು. ಕರಾವಳಿ ಮೇಳಗಳು, ಉತ್ಸವಗಳು ಮತ್ತು ವಿಶೇಷ ಮಾರ್ಕೆಟಿಂಗ್ ಕಾರ್ಯಕ್ರಮಗಳ ಮೂಲಕ ರಾಜ್ಯದ ಪ್ರವಾಸೋದ್ಯಮ ಬ್ರ್ಯಾಂಡ್ನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಿಎಂ ಸಲಹೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ನಟ ಹಾಗೂ ಚಲನಚಿತ್ರ ನಿರ್ಮಾಪಕ ರಿಷಬ್ ಶೆಟ್ಟಿ ಮಾತನಾಡಿ, ಕರಾವಳಿ ಭಾಗದ ಜನಪದ ಕಲೆ, ಸಂಗೀತ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ವೈಶಿಷ್ಟ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಸ್ಥಳೀಯ ಕಲೆ ಮತ್ತು ಸಂಸ್ಕೃತಿಯೇ ಕರಾವಳಿಯ ಗುರುತಾಗಿದ್ದು, ಅವುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ವಿಶೇಷ ಯೋಜನೆಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.
ಸಿನಿಮಾ ಚಿತ್ರೀಕರಣಕ್ಕೆ ಅಗತ್ಯವಿರುವ ಅನುಕೂಲಗಳನ್ನು ಹೆಚ್ಚಿಸುವ ಮೂಲಕ ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳ ಸಿನಿಮಾ ಕ್ಷೇತ್ರಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬಹುದಾಗಿದೆ. ಇದರಿಂದ ಪ್ರವಾಸೋದ್ಯಮ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ರಿಷಬ್ ಶೆಟ್ಟಿ ಹೇಳಿದರು.
ಸಭೆಯಲ್ಲಿ ಪಾಲ್ಗೊಂಡ ಉದ್ಯಮಿಗಳು ಕರಾವಳಿ ಪ್ರದೇಶಗಳಲ್ಲಿ ಹೆಲಿ ಟೂರಿಸಂ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇದರಿಂದ ಉನ್ನತ ಮಟ್ಟದ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ದೊರೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರಾವಳಿ ಪ್ರವಾಸೋದ್ಯಮವನ್ನು ರಾಜ್ಯದ ವಿಶೇಷ ಕ್ಷೇತ್ರವಾಗಿ ಪರಿಗಣಿಸಿ, ಹೂಡಿಕೆದಾರರನ್ನು ಆಕರ್ಷಿಸಲು ಸಹಾಯಧನ, ಬಡ್ಡಿ ಸಹಾಯಧನ ಹಾಗೂ ವಿವಿಧ ರಿಯಾಯಿತಿಗಳ ಮೂಲಕ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಒತ್ತಿ ಹೇಳಿದರು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಯಶಸ್ವಿಗೊಳಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಅವರು ತಿಳಿಸಿದರು.