ಸ್ನೇಹಾಲಯದ ಸೇವಾ ಕಾರ್ಯಗಳಿಗೆ ನಿಧಿ ಸಂಗ್ರಹಾರ್ಥ ಜೂನ್ 21ರಂದು ಸಂಗೀತ ರಸಮಂಜರಿ

ಮಂಗಳೂರು, ಮಾನಸಿಕ ಅಸ್ವಸ್ಥರ ರಕ್ಷಣೆ, ಚಿಕಿತ್ಸೆ, ಪುನರ್ವಸತಿ ಹಾಗೂ ಸಮಾಜದ ಮುಖ್ಯವಾಹಿನಿಗೆ ಮರುಸೇರಿಸುವ ಕಾರ್ಯದಲ್ಲಿ ತೊಡಗಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಬಾಚಳಿಕೆಯ ಸ್ನೇಹಾಲಯ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ನಿಧಿ ಸಂಗ್ರಹಾರ್ಥ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಜೂನ್ 21ರಂದು ಸಂಜೆ 6 ಗಂಟೆಗೆ ಮಂಗಳೂರಿನ ಟೌನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.

2009ರಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಕಳೆದ 17 ವರ್ಷಗಳಲ್ಲಿ 1,750ಕ್ಕೂ ಅಧಿಕ ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ, ಚಿಕಿತ್ಸೆ ನೀಡಿ, ಅವರ ಕುಟುಂಬಗಳೊಂದಿಗೆ ಪುನರ್ಮಿಲನಗೊಳಿಸಿ ಪುನರ್ವಸತಿ ಕಲ್ಪಿಸಿರುವುದಾಗಿ ಸಂಸ್ಥೆ ತಿಳಿಸಿದೆ. ಪ್ರಸ್ತುತ ಸಂಸ್ಥೆಯಲ್ಲಿ 375ಕ್ಕೂ ಅಧಿಕ ನಿವಾಸಿಗಳು ಆಶ್ರಯ ಪಡೆದಿದ್ದಾರೆ.

ಸಂಸ್ಥೆಯ ವಿವಿಧ ಯೋಜನೆಗಳು, ನಿವಾಸಿಗಳ ಅಗತ್ಯತೆಗಳು, ಮನೋರೋಗ ಚಿಕಿತ್ಸಾ ಸೇವೆಗಳು, ಡಿ-ಅಡಿಕ್ಷನ್ ಕಾರ್ಯಕ್ರಮಗಳು ಹಾಗೂ ವಿಶೇಷ ಅಗತ್ಯವುಳ್ಳ ಕುಟುಂಬಗಳ ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಮಾನವೀಯ ಕಾರ್ಯಗಳಿಗೆ ನೆರವು ಒದಗಿಸುವ ಉದ್ದೇಶದಿಂದ ಈ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಖ್ಯಾತ ಉದ್ಯಮಿ, ಗೀತರಚನೆಕಾರ, ಸಂಗೀತ ಸಂಯೋಜಕ ಹಾಗೂ ಗಾಯಕ ಕೆವಿನ್ ಮಿಸ್ಕಿತ್ ಕಾರ್ಯಕ್ರಮದ ರೂವಾರಿಯಾಗಿದ್ದು, ಅವರು ವಿಶ್ವದ ವಿವಿಧ ದೇಶಗಳಲ್ಲಿ 53ಕ್ಕೂ ಅಧಿಕ ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್, ಒಮಾನ್ ಹಾಗೂ ಬಹ್ರೈನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತಮ್ಮ ಸಂಗೀತದ ಮೂಲಕ ಜನಮನ ಗೆದ್ದಿರುವ ಅವರು, ಏಳು ವರ್ಷಗಳ ವಿರಾಮದ ಬಳಿಕ ವಿಶೇಷ ಸಂಗೀತ ಕಾರ್ಯಕ್ರಮದೊಂದಿಗೆ ಮತ್ತೆ ವೇದಿಕೆಗೆ ಮರಳುತ್ತಿದ್ದಾರೆ.

ಕಾರ್ಯಕ್ರಮದಿಂದ ಸಂಗ್ರಹವಾಗುವ ಸಂಪೂರ್ಣ ನಿಧಿಯನ್ನು ಸ್ನೇಹಾಲಯದ ಮಾನವೀಯ ಸೇವಾ ಕಾರ್ಯಗಳಿಗೆ ಮೀಸಲಿಡಲಾಗುವುದು ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಜೋಸೆಫ್ ಕ್ರಾಸ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ನೀಡುವಂತೆ ಅವರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!