ಮತದಾರರ ಹೆಸರು ಕೈತಪ್ಪದಂತೆ ಕಾಂಗ್ರೆಸ್‌ನಿಂದ ಬಿಎಲ್-2 ನೇಮಕ: ಬಿ.ಕೆ. ಹರಿಪ್ರಸಾದ್

ಮಂಗಳೂರು, ಮತದಾರರ ಸಮಗ್ರ ವಿಶೇಷ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳು ಕೈತಪ್ಪದಂತೆ ನೋಡಿಕೊಳ್ಳಲು ಕಾಂಗ್ರೆಸ್ ಪಕ್ಷದಿಂದ ಬಿಎಲ್-2ಗಳನ್ನು ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 30ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದ್ದು, ಬಿಎಲ್-2ಗಳು ಮನೆಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಹಕರಿಸಲಿದ್ದಾರೆ ಎಂದರು.

ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳಲ್ಲಿ ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಉದಾಹರಣೆಗಳಿದ್ದು, ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಉಂಟಾಗದಂತೆ ಕಾಂಗ್ರೆಸ್ ನಿಗಾ ವಹಿಸಲಿದೆ ಎಂದು ಹೇಳಿದರು. ಬಡವರು, ಹಿಂದುಳಿದವರು ಹಾಗೂ ದುರ್ಬಲ ವರ್ಗದ ಜನರ ಹೆಸರು ಮತದಾರರ ಪಟ್ಟಿಯಲ್ಲಿ ಇರಲೇಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಎಸ್‌ಐಆರ್ ಪ್ರಕ್ರಿಯೆಗೆ ವಿರೋಧಿಯಲ್ಲ, ಆದರೆ ನೈಜ ಮತದಾರರ ಹಕ್ಕು ಕಾಪಾಡುವ ನಿಲುವು ಹೊಂದಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಉತ್ತಮ ಮಟ್ಟದಲ್ಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಹೊಸ ಇನ್ನಿಂಗ್ಸ್ ಆರಂಭವಾಗಿದೆ. ಇದರೊಂದಿಗೆ ಪಕ್ಷ ಸಂಘಟನೆಗೂ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಕರಾವಳಿ ಭಾಗದ ಮಲೆಕುಡಿಯರು ಸೇರಿದಂತೆ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳನ್ನು ಮಳೆಗಾಲದಲ್ಲಿ ಸಂಪರ್ಕಿಸುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರತ್ಯೇಕ ಎಸ್‌ಐಆರ್ ಅಭಿಯಾನ ನಡೆಸುವಂತೆ ಚುನಾವಣಾ ಆಯೋಗವನ್ನು ಕೋರಲಾಗಿದೆ. ಮಳೆ ಕಾರಣದಿಂದ ಪ್ರಕ್ರಿಯೆಗೆ ಅಡಚಣೆ ಉಂಟಾದರೆ ವಿಶೇಷ ಅಭಿಯಾನ ಹಮ್ಮಿಕೊಳ್ಳುವುದಾಗಿ ಆಯೋಗ ಭರವಸೆ ನೀಡಿದೆ ಎಂದು ಹೇಳಿದರು.

ಖಾಲಿ ಇರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಹೊಸ ವಿಧಾನ ಜಾರಿಗೊಳಿಸಲಾಗಿದೆ. ಎಐಸಿಸಿ ನೇಮಿಸುವ ವೀಕ್ಷಕರು ಒಂದು ವಾರ ಕಾಲ ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಿ, ಜಿಲ್ಲೆಯಿಂದ ಕನಿಷ್ಠ ಎರಡು ಮತ್ತು ಗರಿಷ್ಠ ಆರು ಹೆಸರುಗಳನ್ನು ದೆಹಲಿಗೆ ಕಳುಹಿಸಲಿದ್ದಾರೆ. ಅಲ್ಲಿಂದ ಅಂತಿಮವಾಗಿ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಅಡ್ಡಮತದಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವರು ಆತ್ಮಸಾಕ್ಷಿಗೆ ಅನುಗುಣವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದರು.

ಸಂಪುಟ ವಿಸ್ತರಣೆ, ಸಚಿವ ಸ್ಥಾನ ಹಂಚಿಕೆ ಹಾಗೂ ನಿಗಮ-ಮಂಡಳಿಗಳ ನೇಮಕಾತಿ ಕುರಿತು ಅಂತಿಮ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳಲಿದೆ. ಹೊಸಬರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಎಸ್‌ಐಆರ್ ರಾಜ್ಯ ಸಮಿತಿ ಅಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಜೆ.ಆರ್. ಲೋಬೋ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!