ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ :-

ಮೆಸ್ಕಾಂ ವ್ಯಾಪ್ತಿಯಲ್ಲಿ ಸಮಾನಾಂತರ ವಿದ್ಯುತ್ ಪರವಾನಿಗೆಗಾಗಿ ಟಾಟಾ ಪವ‌ರ್ ಕಾರ್ಪೊರೇಷನ್ ಸಲ್ಲಿಸಿರುವ ಅರ್ಜಿಯನ್ನು ರದ್ದುಪಡಿಸಲು ಹಾಗೂ ವಿದ್ಯುತ್ ಕ್ಷೇತ್ರದ ಖಾಸಗೀಕರಣ ತಡೆಗಟ್ಟಲು ಕೋರಿ ವಿದ್ಯುತ್ ನೌಕರರ ಒಕ್ಕೂಟದ ಪದಾಧಿಕಾರಿಗಳು ಮಂಗಳೂರು ನಗರ ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ರಿಗೆ ಮನವಿ ಸಲ್ಲಿಸಿದರು.

ಟಾಟಾ ಪವರ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಮಹಾನಗರ ಪಾಲಿಕೆ, ನಗರಸಭೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದು, ನಗರವನ್ನು ಕೇಂದ್ರವಾಗಿಟ್ಟುಕೊಂಡು ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶ, ಬಡವರು, ಮಧ್ಯಮ ವರ್ಗದವರು, ರೈತರಿಗೆ ತೊಂದರೆಯಾಗುವುದಲ್ಲದೇ, ವಿದ್ಯುತ್ ದರ ಹೆಚ್ಚಳದ ಬಿಸಿಯೂ ತಟ್ಟಲಿದೆ. ಈ ಖಾಸಗಿಯವರು ಕಳೆದ ನೂರಾರು ವರ್ಷಗಳಿಂದ ನಾಗರಿಕರ ತೆರಿಗೆ, ವಿದ್ಯುತ್ ಬಿಲ್, ಸರ್ಕಾರಗಳ ಅನುದಾನಗಳಿಂದ ನಿರ್ಮಾಣಗೊಂಡಿರುವ ಬೃಹತ್ ಮೆಸ್ಕಾಂ ವಿದ್ಯುತ್ ಜಾಲವನ್ನು ಬಳಸಿಕೊಂಡೇ ಕಾರ್ಯ ನಿರ್ವಹಿಸಲಿರುವುದು ಜನರ ತೆರಿಗೆಗೆ ಮಾಡುವ ಅನ್ಯಾಯವಾಗಿದೆ ಎಂದು ಒಕ್ಕೂಟವು ಶಾಸಕರಲ್ಲಿ ಮನವಿ ಮಾಡಿತು.

ಮನವಿ ಸ್ವೀಕರಿಸಿದ ಶಾಸಕ ಕಾಮತ್ ರವರು, ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಕ್ಷೇತ್ರದ ಯಾರೊಬ್ಬರನ್ನೂ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಇದೀಗ ಖಾಸಗೀಕರಣ ಹೆಸರಲ್ಲಿ ಮೆಸ್ಕಾಂ ಸಹಿತ ರಾಜ್ಯದ ವಿದ್ಯುತ್ ಕ್ಷೇತ್ರಗಳನ್ನು ಖಾಸಗಿ ಸುಪರ್ದಿಗೆ ವಹಿಸಲು ಹಾತೊರೆಯುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೂ ಅನ್ಯಾಯ, ವಿದ್ಯುತ್ ಕಂಪೆನಿಗಳ ಕಾರ್ಮಿಕರ ಜೀವನ ಭದ್ರತೆಗೂ ಧಕ್ಕೆಯಾಗಲಿದೆ. ಹಾಗಾಗಿ ಈ ಖಾಸಗಿ ಅರ್ಜಿಯನ್ನು ಕರ್ನಾಟಕ ಸರಕಾರವು ವಿದ್ಯುಚ್ಛಕ್ತಿ ಕಾಯ್ದೆಯ 108 ನೇ ಪರಿಚ್ಛೇದದ ಮೂಲಕ ರದ್ದುಪಡಿಸಲು ಕ್ರಮ ವಹಿಸಬೇಕು ಮತ್ತು ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ಮುಂದಾಗಬಾರದು ಎಂದು ಮುಖ್ಯಮಂತ್ರಿಗಳಿಗೆ, ಇಂಧನ ಸಚಿವರಿಗೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಿಗೆ, ಪತ್ರ ಮುಖೇನ ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!