ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10 ನೇ ಮಹಾ ಮೇಳ – ಹೊರನಾಡ ಕನ್ನಡಿಗರ ಗೋಷ್ಠಿ, ಗಡಿನಾಡು – ಹೊರನಾಡು ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ.

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ “ಗಿಳಿವಿಂಡು “ಸಮಗ್ರ ಅಭಿವೃದ್ದಿಗಾಗಿ ಕೇರಳ – ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.


ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ಆಶ್ರಯದಲ್ಲಿ ಮಹಾರಾಷ್ಟ್ರದ ಸೋಲಾಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಸಮೀಪದ ಹುತಾತ್ಮ ಸ್ಮೃತಿ ಮಂದಿರದಲ್ಲಿ 2026 ಜೂನ್ 20 ಮತ್ತು 21 ರಂದು ನಡೆದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10 ನೇ ಮಹಾಮೇಳದಲ್ಲಿ ಹೊರನಾಡ ಕನ್ನಡಿಗರ ಗೋಷ್ಠಿಯಲ್ಲಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಗಡಿನಾಡು ಕಾಸರಗೋಡು ಕನ್ನಡಿಗರ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.


ಹಲವು ದಶಕಗಳ ಹಿಂದೆ ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇರಳ – ಕರ್ನಾಟಕ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ 2017 ಜನವರಿ 11 ರಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕರ್ನಾಟಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಅನುದಾನ ನೀಡಿ ರಾಷ್ಟ್ರಕವಿ ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ – ಗಿಳಿವಿಂಡು, ಮತ್ತು ಭವನಿಕಾ ಲಲಿತಕಲಾ ಮಂದಿರವನ್ನು ಉದ್ಘಾಟಿಸಿದ್ದು ಆನಂತರ ಪುನರ್ ನಿರ್ಮಾಣ ಕಾಮಗಾರಿಯು ಪರಿಪೂರ್ಣವಾಗದೆ ಸ್ಥಗಿತಗೊಂಡಿತ್ತು. ರಾಷ್ಟ್ರ ಕವಿ ಹೆಸರಿನಲ್ಲಿ ಟ್ರಸ್ಟ್ ಸಮಿತಿಯನ್ನು ರೂಪೀಕರಿಸಿ ಕಾರ್ಯ ಪ್ರವೃತ್ತರಾದರೂ, ಇವುಗಳ ನಿರಾಸಕ್ತಿಯಿಂದ ರಾಷ್ಟ್ರಕವಿ ನಿವಾಸ,ಗ್ರಂಥ ಭಂಡಾರ,ವಸ್ತು ಸಂಗ್ರಹಾಲಯ, ಅತಿಥಿ ಗೃಹ, ಒಳಸಭಾಂಗಣ, ಸಭಾ ಭವನದ ಕಾಮಗಾರಿಗಳು ಅಪೂರ್ಣವಾಗಿದ್ದು,ಇರುವ ಇಬ್ಬರು ಅರೆಕಾಲಿಕ ನೌಕರರಿಗೆ ತಿಂಗಳ ಸಂಬಳ ಪಾವತಿಯಾಗದೇ ಶೋಚನೀಯ ಸ್ಥಿತಿಯಲ್ಲಿದೆ. ಗೋವಿಂದ ಪೈ ನಿಧನದ ಬಳಿಕ ರಾಷ್ಟ್ರ ಕವಿ ಸ್ಮಾರಕ ನಿರ್ಮಿಸುವ ಉದ್ದೇಶದಿಂದ ಅವರ 1.82 ಎಕರೆ ಭೂಮಿಯಲ್ಲಿ ರಾಷ್ಟ್ರಕವಿ ಸ್ಮಾರಕದ ಸಮಗ್ರ ಅಭಿವೃದ್ಧಿಗಾಗಿ ಕುಟುoಬಸ್ಥರು ಕೇರಳ ಸರಕಾರಕ್ಕೆ ಹಸ್ತಾಂತರಿಸಿದರು.

ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ನಿವಾಸ ಗಿಳಿವಿಂಡುವನ್ನು ಪುನರ್ ನಿರ್ಮಾಣಗೊಳಿಸುವ ಉದ್ದೇಶದಿಂದ ಕೇರಳ ಸರಕಾರದ ನೂತನ ಮುಖ್ಯಮಂತ್ರಿ ವಿ.ಡಿ ಸತೀಶನ್, ಕರ್ನಾಟಕ ಸರಕಾರದ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಕರ್ನಾಟಕ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರಲ್ಲಿಗೆ ರಾಜ್ಯದ ಹಿರಿಯ ಸಾಹಿತಿಗಳು, ವಿದ್ವಾಂಸರು,ಕಲಾವಿದರು, ಚಲನಚಿತ್ರನಟರು, ಮಾಧ್ಯಮದವರು,ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗದೊಂದಿಗೆ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗುವುದು.

ಕೇರಳ – ಕರ್ನಾಟಕ ಸರಕಾರದ ಜಂಟಿ ಸಹಯೋಗದಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸಮಿತಿಯನ್ನು ಪುನರ್ ರೂಪೀಕರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ, ನಿರ್ದೇಶಕರಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ನಿವಾಸವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಲು ಕರ್ನಾಟಕ ಮುಖ್ಯಮಂತ್ರಿಗಳು ವಿಶೇಷ ಮುತುವರ್ಜಿ ವಹಿಸಬೇಕೆಂದು ಕರ್ನಾಟಕ ರಾಜ್ಯದ ಎಲ್ಲಾ ಸಂಘ-ಸಂಸ್ಥೆಗಳು ಒಮ್ಮತದಿಂದ ಕೇರಳ ಮತ್ತು ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಿಗೆ ನಿರಂತರ ಮನವಿಯನ್ನು ಸಲ್ಲಿಸುವ ಮೂಲಕ ಅಗ್ರಹಿಸಬೇಕಾಗಿದೆ.


ಕೇರಳ ಸರಕಾರವು ಕೇರಳ ಕನ್ನಡ ಅಕಾಡೆಮಿ ಸ್ಥಾಪಿಸಲು ಮನವಿ
ಕೇರಳ ರಾಜ್ಯದಲ್ಲಿ ನೆಲೆಸಿರುವ ಸರ್ವ ಕನ್ನಡಿಗರು, ಕನ್ನಡ ಉಪಭಾಷೆಯ ಜನಾಂಗದವರ ಹಿತರಕ್ಷಣೆಗಾಗಿ ಹಾಗೂ ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಉಳಿಸಿ ಬೆಳೆಸಲು ಸಮಗ್ರವಾದ ಸಾಂಸ್ಕೃತಿಕ ಕನ್ನಡೀಕರಣ ಯೋಜನೆಯನ್ನು ಸಿದ್ಧಪಡಿಸಿ, ಮುಂದಿನ ಬಜೆಟ್ ನಲ್ಲಿ ಕೇರಳ ಸರಕಾರವು ಒಂದು ಕೋಟಿ ರೂಪಾಯಿ ಮೊತ್ತದ ಕನ್ನಡ ಸಾಂಸ್ಕೃತಿಕ ನಿಧಿಯೊoದನ್ನು ಸ್ಥಾಪಿಸಿ, ನೂತನವಾಗಿ ಕೇರಳ ಕನ್ನಡ ಅಕಾಡೆಮಿಯನ್ನು ಸ್ಥಾಪಿಸಬೇಕೆಂದು ಪ್ರಸ್ತಾವನೆಯ ಮನವಿಯನ್ನು ಕೇರಳ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರಿಗೆ ನೀಡಿ ಒತ್ತಾಯಿಸಲಾಗಿದೆ.


ಕೇರಳ ಸರಕಾರವು ಮಲಯಾಳಂ ಭಾಷಾ ಬಿಲ್ಸ್ -2025 ಸೂಕ್ತ ತಿದ್ದುಪಡಿಗೆ ಆಗ್ರಹಿಸಿ ಕೇರಳ ಮುಖ್ಯ ಮಂತ್ರಿಗೆ ಮನವಿ ಕೇರಳ ಸರಕಾರವು (ಮಲಯಾಳಂ ಭಾಷಾ ಬಿಲ್ಸ್- 2025) ಮಲಯಾಳ ಭಾಷಾ ಮಸೂದೆಯನ್ನು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಿದ್ದು ಈ ಮಸೂದೆಯನ್ನು ಪುನರ್ ಪರಿಶೀಲಿಸಿ ಸೂಕ್ತ ತಿದ್ದುಪಡಿಗಳನ್ನು ಮಾಡುವುದು ಕಾಸರಗೋಡು ಕನ್ನಡಿಗರು ಹಾಗೂ ಕನ್ನಡ ಮಕ್ಕಳ ಭಾಷಾ ಮತ್ತು ಶೈಕ್ಷಣಿಕ ಹಕ್ಕುಗಳ ಸಂರಕ್ಷಣೆಗಾಗಿ ಕೇರಳ ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತಿದ್ದು, ಕಾಸರಗೋಡು ಕನ್ನಡಿಗರ ನ್ಯಾಯಯುತ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿಯು ಕಾಸರಗೋಡು ಜಿಲ್ಲೆಯ ಶಾಸಕರು,ಜನಪ್ರತಿನಿಧಿಗಳು ಹಾಗೂ ಕೇರಳ ಸರಕಾರದ ಕರ್ತವ್ಯವಾಗಿದ್ದು,ಈ ಕುರಿತು ಕೇರಳ ಮುಖ್ಯಮಂತ್ರಿ ವಿ. ಡಿ ಸತೀಶನ್ ಅವರಿಗೆ, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಭಾರತೀಯ ಜನತಾ ಪಾರ್ಟಿಯ ಕೇರಳ ರಾಜ್ಯ ಸಮಿತಿಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ – 2026 ಮತ್ತು ಕೇರಳ – ಕರ್ನಾಟಕ ಉತ್ಸವಕ್ಕೆ ಕರ್ನಾಟಕ ಸರ್ಕಾರದಿಂದ ವಿಶೇಷ ಅನುದಾನಕ್ಕೆ ಮನವಿ
ಕಾಸರಗೋಡು ಕನ್ನಡ ಗ್ರಾಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.), ಕಾಸರಗೋಡು ನೇತೃತ್ವದಲ್ಲಿ 2026 ನವಂಬರ್ 7 ಮತ್ತು 8 ರಂದು ನಡೆಯುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ- 2026 ಮತ್ತು ಕೇರಳ -ಕರ್ನಾಟಕ ಉತ್ಸವ, ಕೇರಳ -ಕರ್ನಾಟಕ ಕನ್ನಡ ರಾಜ್ಯೋತ್ಸವದ ಯಶಸ್ವಿ ಸಂಘಟನೆಗೆ ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರಿಂದ 50 ಲಕ್ಷ ರೂಪಾಯಿ ಮೊತ್ತದ ವಿಶೇಷ ಅನುದಾನವನ್ನು ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.


ಕೇರಳ – ಕರ್ನಾಟಕ ಭವನ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ವಿಶೇಷ ಅನುದಾನಕ್ಕೆ ಮನವಿ ಕಾಸರಗೋಡಿನಲ್ಲಿ ನಿರಂತರವಾಗಿ ಕನ್ನಡ ಭಾಷೆ, ಸಾಹಿತ್ಯ,ಸಾಂಸ್ಕೃತಿಕ ಚಟುವಟಿಕೆಯನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಅಂತಸ್ತಿನ ಕೇರಳ- ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯದ ನಿರ್ಮಾಣ ಯೋಜನೆಯನ್ನು ಕೈಗೊಳ್ಳಲಾಗಿದೆ.


ಕೇರಳ – ಕರ್ನಾಟಕ ಭವನದಲ್ಲಿ ನಾಲ್ಕು ಅತಿಥಿಗೃಹಗಳು,ಸಾಂಸ್ಕೃತಿಕ ಸಭಾಂಗಣ,ಪ್ರಾದೇಶಿಕ ಜಾನಪದ ವಸ್ತು ಸಂಗ್ರಹಾಲಯ, ಆರ್ಟ್ ಗ್ಯಾಲರಿ,ಗ್ರಂಥಾಲಯ, ಸಾರ್ವಜನಿಕ ಸಂಪರ್ಕ- ಮಾಧ್ಯಮ ಕೇಂದ್ರ, ಕಾಸರಗೋಡು ಸ್ವಉದ್ಯೋಗ ತರಬೇತಿ ಕೇಂದ್ರ, ಕಾಸರಗೋಡು ಗೋ -ಕುಟೀರ, ಕೃಷಿ ಕುಟೀರ, ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆಗಾಗಿ ಗ್ರಾಮೀಣ ಕ್ಲಿನಿಕ್,ಗಡಿನಾಡಿನ ಕನ್ನಡ ವಿದ್ಯಾರ್ಥಿಗಳಿಗಾಗಿ ರಜಾ ದಿನಗಳಲ್ಲಿ ಗುರುಕುಲ ಮಾದರಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ,ಸಂಗೀತ ನೃತ್ಯ ಸಾಂಸ್ಕೃತಿಕ, ರಂಗಭೂಮಿ, ಯಕ್ಷಗಾನ ಚಟುವಟಿಕೆಗಳ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕೇರಳ- ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣಕ್ಕೆ ಕರ್ನಾಟಕ ಸರಕಾರವು 6 ಕೋಟಿ ರೂಪಾಯಿ ಮೊತ್ತದ ವಿಶೇಷ ಅನುದಾನವನ್ನು ಮುಂದಿನ ಬಜೆಟ್ ನಲ್ಲಿ ಘೋಷಿಸಲು ಮನವಿ ಸಲ್ಲಿಸಲಾಗಿದೆ.

ಕೇರಳ – ಕರ್ನಾಟಕ ಭವನದ ಶಿಲಾನ್ಯಾಸವನ್ನು 2026 ನವಂಬರ್ 7 ಮತ್ತು 8ರಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇರಳ ಮುಖ್ಯ ಮಂತ್ರಿ ವಿ. ಡಿ. ಸತೀಶನ್ ಅವರಿಂದ ನೆರವೇರಿಸಲಾಗುವುದು.


ಸಂಪರ್ಕ :-ಶಿವರಾಮ ಕಾಸರಗೋಡು, ಅಧ್ಯಕ್ಷರು,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ. ),ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕನ್ನಡ ಗ್ರಾಮ,
ಕಾಸರಗೋಡು-671121
ಮೊಬೈಲ್ :-9448572016

SHARE
Loading spinner

Leave a Reply

Your email address will not be published. Required fields are marked *

error: Content is protected !!