ಮಂಗಳೂರು: 2026-27ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಭತ್ತದ ಬೆಳೆಗೆ ನೋಂದಣಿ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನವಾಗಿದೆ.
ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಇಂಡಸ್ ಇಂಡ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಅನ್ನು ನೇಮಿಸಲಾಗಿದೆ.
ಭತ್ತದ ಬೆಳೆಗೆ ಪ್ರತಿ ಎಕರೆಗೆ ಒಟ್ಟು ವಿಮಾ ಮೊತ್ತ ರೂ.30,595.32 ನಿಗದಿಯಾಗಿದ್ದು, ರೈತರ ವಂತಿಕೆಯಾಗಿ ಶೇ.2ರಂತೆ ರೂ.611.91 ವಿಮಾ ಕಂತು ಪಾವತಿಸಬೇಕಾಗಿದೆ. ಅರ್ಹ ರೈತರು ನಿಗದಿತ ಅವಧಿಯೊಳಗೆ ಬ್ಯಾಂಕ್‌ಗಳ ಮೂಲಕ ವಿಮಾ ಕಂತು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು.
ಬಿತ್ತನೆ ವಿಫಲ, ಬೆಳೆ ಬೆಳವಣಿಗೆಯ ಹಂತದಲ್ಲಿ ಉಂಟಾಗುವ ನಷ್ಟ, ಕಟಾವಿನ ನಂತರ ಅಕಾಲಿಕ ಮಳೆ, ಚಂಡಮಾರುತ, ಭೂಕುಸಿತ, ಬೆಳೆ ಮುಳುಗಡೆ ಹಾಗೂ ಆಲಿಕಲ್ಲು ಮಳೆಯಿಂದಾಗುವ ಹಾನಿಗೆ ಯೋಜನೆಯ ಮಾರ್ಗಸೂಚಿಯಂತೆ ವಿಮಾ ಪರಿಹಾರ ದೊರೆಯಲಿದೆ.
ನೋಂದಣಿಗೆ ಆಧಾರ್ ಕಾರ್ಡ್, ಪಹಣಿ (ಆರ್‌ಟಿಸಿ), ಬ್ಯಾಂಕ್ ಪಾಸ್‌ಬುಕ್, ಬೆಳೆ ಬಿತ್ತನೆ ದೃಢೀಕರಣ ಪತ್ರ ಹಾಗೂ ಸಾಲ ಪಡೆಯದ ರೈತರಿಗೆ ಸ್ವಯಂ ಘೋಷಣಾ ಪತ್ರ ಕಡ್ಡಾಯವಾಗಿದೆ. ಬೆಳೆ ಸಾಲ ಪಡೆದ ರೈತರು ವಿಮೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಕೊನೆಯ ದಿನಾಂಕಕ್ಕೆ ಒಂದು ವಾರ ಮುಂಚಿತವಾಗಿ ಸಂಬಂಧಿಸಿದ ಬ್ಯಾಂಕ್‌ಗೆ ಲಿಖಿತವಾಗಿ ತಿಳಿಸಬೇಕು.
ಗ್ರಾಮ ಒನ್, ಕರ್ನಾಟಕ ಒನ್, ರೈತ ಸಂಪರ್ಕ ಕೇಂದ್ರ ಅಥವಾ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.