ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ MSME ವಲಯದ ಪಾತ್ರ ಮಹತ್ವದ್ದು: ಸಿ.ಎ.ಎಸ್.ಎಸ್. ನಾಯಕ್

ಮಂಗಳೂರು, ಜೂ.27: ದೇಶದ ಆರ್ಥಿಕತೆ ಬಲವರ್ಧನೆ, ಉದ್ಯೋಗ ಸೃಷ್ಟಿ ಹಾಗೂ ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸಿ.ಎ.ಎಸ್.ಎಸ್. ನಾಯಕ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಅಭಿವೃದ್ಧಿ ಮತ್ತು ಆರ್ಥಿಕತೆಯಲ್ಲಿ MSME ವಲಯದ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು 2017ರಿಂದ ಪ್ರತಿ ವರ್ಷ ಜೂನ್ 27ರಂದು ಅಂತರರಾಷ್ಟ್ರೀಯ MSME ದಿನವನ್ನು ಆಚರಿಸುತ್ತಿದ್ದು, 193 ರಾಷ್ಟ್ರಗಳು ಈ ಆಚರಣೆಯಲ್ಲಿ ಭಾಗಿಯಾಗಿವೆ ಎಂದು ತಿಳಿಸಿದರು.

ಪ್ರಸಕ್ತ ವರ್ಷದ ಘೋಷವಾಕ್ಯ “ನಾವೀನ್ಯತೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯ ಮೂಲಕ MSMEಗಳ ಸಬಲೀಕರಣ” ಆಗಿದ್ದು, ದೇಶದಲ್ಲಿ ಸುಮಾರು 39 ಕೋಟಿ ಜನರಿಗೆ MSME ವಲಯ ಉದ್ಯೋಗ ಕಲ್ಪಿಸಿದೆ. ಉದ್ಯಮ್ ನೋಂದಣಿ ಪೋರ್ಟಲ್‌ನಲ್ಲಿ ಈಗಾಗಲೇ 8.76 ಕೋಟಿಗೂ ಅಧಿಕ ಉದ್ಯಮಗಳು ನೋಂದಣಿಯಾಗಿದ್ದು, ಯಾವುದೇ ಶುಲ್ಕವಿಲ್ಲದೆ ಐದು ನಿಮಿಷಗಳಲ್ಲಿ ಆನ್‌ಲೈನ್ ಮೂಲಕ ಸ್ವಯಂ ಘೋಷಣೆಯ ಆಧಾರದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.

ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ ಯಾವುದೇ ಭದ್ರತೆ ಇಲ್ಲದೆ 10 ಕೋಟಿ ರೂ.ವರೆಗೆ ಸಾಲ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ 20 ಕೋಟಿ ರೂ.ವರೆಗೆ ಭದ್ರತೆ ರಹಿತ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯಡಿ ಇದುವರೆಗೆ 13 ಲಕ್ಷ ಕೋಟಿ ರೂ. ಸಾಲ ವಿತರಿಸಲಾಗಿದ್ದು, 758 MSMEಗಳಿಗೆ 18,495 ಕೋಟಿ ರೂ. ಈಕ್ವಿಟಿ ಹೂಡಿಕೆ ಮಾಡಲಾಗಿದೆ. ‘ಸೆಲ್ಫ್ ರಿಲಯಂಟ್ ಇಂಡಿಯಾ ಫಂಡ್’ ಮೂಲಕವೂ ವಿಶೇಷ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP), ಪಿಎಂ ವಿಶ್ವಕರ್ಮ ಯೋಜನೆ, ಪಿಎಂ ಎಫ್‌ಎಂಇ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಉದ್ಯಮಿಗಳಿಗೆ ದೊರೆಯುತ್ತಿರುವ ಸಾಲ, ಸಬ್ಸಿಡಿ ಹಾಗೂ ಇತರ ಸೌಲಭ್ಯಗಳ ಕುರಿತು ಅವರು ವಿವರಿಸಿದರು. MSME ಉದ್ಯಮಿಗಳು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಉದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಹ ಸಂಚಾಲಕರಾದ ಜಿ. ಯೋಗೀಶ್ ಪೈ, ಸದಸ್ಯರಾದ ರಾಜೇಶ್ ರಾವ್ ಎಂ., ವಸಂತ ಶೆಟ್ಟಿ, ಡಾ. ಎಸ್.ಎಂ. ಶಿವಪ್ರಕಾಶ್, ರಘುನಾಥ್ ಪೈ ಹಾಗೂ ಎಂ. ಸುಂದರ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!