ಪುತ್ತೂರು/ಮೈಸೂರು: ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಮೊದಲ ಬಾರಿಗೆ ಕಂಬಳ ಆಯೋಜನೆಗೆ ಸಿದ್ಧತೆಗಳು ಆರಂಭಗೊಂಡಿದ್ದು, ಪುತ್ತೂರು ಶಾಸಕ ಅಶೋಕ್ ರೈ ಅವರು ಶುಕ್ರವಾರ ಮೈಸೂರಿನ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಕಳೆದ ವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಶಾಸಕ ಅಶೋಕ್ ರೈ ಅವರನ್ನು ಭೇಟಿ ಮಾಡಿ, ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಪೂರ್ವಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ.
ಬೆಂಗಳೂರಿನಲ್ಲಿ ಕಂಬಳವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ತುಳುನಾಡಿನ ಸಾಂಪ್ರದಾಯಿಕ ಜನಪದ ಕ್ರೀಡೆಯನ್ನು ರಾಜ್ಯ ಹಾಗೂ ದೇಶದ ಜನತೆಗೆ ಪರಿಚಯಿಸುವಲ್ಲಿ ಶಾಸಕ ಅಶೋಕ್ ರೈ ಪ್ರಮುಖ ಪಾತ್ರ ವಹಿಸಿದ್ದರು. ಈ ಯಶಸ್ಸಿನ ಬಳಿಕ ಮೈಸೂರಿನಲ್ಲೂ ಕಂಬಳ ಆಯೋಜಿಸುವ ಕುರಿತು ಉಪಮುಖ್ಯಮಂತ್ರಿಯಾಗಿದ್ದಾಗಲೇ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿದ್ದರು. ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ದಸರಾ ಉತ್ಸವದಲ್ಲಿ ಕಂಬಳ ನಡೆಸುವಂತೆ ಅಧಿಕೃತ ಸೂಚನೆ ನೀಡಿದ್ದು, ಇದಕ್ಕೆ ಸರ್ಕಾರದ ಸಂಪೂರ್ಣ ಬೆಂಬಲವಿರಲಿದೆ ಎಂದು ತಿಳಿಸಿದ್ದಾರೆ.
ಕಂಬಳದ ಸ್ಥಳ ಪರಿಶೀಲನೆಗೂ ಮುನ್ನ ಶಾಸಕ ಅಶೋಕ್ ರೈ ಅವರು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಕಂಬಳ ನಡೆಯಲಿರುವ ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿಯ ಅನುಗ್ರಹ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಕಂಬಳ ಆಯೋಜನೆಗೆ ಸೂಕ್ತ ಸ್ಥಳದ ಪರಿಶೀಲನೆ ನಡೆಸಲಾಯಿತು. ಮೈಸೂರಿನ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಸಮೀಪವಿರುವ ಸುಮಾರು 20 ಎಕರೆ ಜಾಗ ಹಾಗೂ ಜಯಲಕ್ಷ್ಮೀಪುರಂನ ಪ್ರೀಮಿಯಂ ಸ್ಟುಡಿಯೋ ಸಮೀಪದ ಸುಮಾರು 17 ಎಕರೆ ಜಾಗವನ್ನು ವೀಕ್ಷಿಸಲಾಯಿತು. ಈ ಎರಡೂ ಸ್ಥಳಗಳ ಪೈಕಿ ತಾಂತ್ರಿಕ ಹಾಗೂ ಆಡಳಿತಾತ್ಮಕವಾಗಿ ಸೂಕ್ತವಾದ ಜಾಗವನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಕಂಬಳ ಪ್ರಮುಖರಾದ ಮುರಳೀಧರ್ ರೈ ಮಟಂತಬೆಟ್ಟು ಹಾಗೂ ರಾಜೀವ್ ಶೆಟ್ಟಿ ಎಡ್ತೂರು ಉಪಸ್ಥಿತರಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, “ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜನೆಯಾಗುತ್ತಿರುವುದು ತುಳುನಾಡಿನ ಜನಪದ ಸಂಸ್ಕೃತಿಗೆ ಹೆಮ್ಮೆಯ ಕ್ಷಣವಾಗಿದೆ. ಜಗತ್ತಿನ ವಿವಿಧ ದೇಶಗಳಿಂದ ದಸರಾ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಕಂಬಳದ ವೈಭವವನ್ನು ಪರಿಚಯಿಸುವ ಅವಕಾಶ ಇದಾಗಿದೆ. ಕಂಬಳ ಸ್ಥಳ ಪರಿಶೀಲನೆಗೂ ಮುನ್ನ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ ಶುಭ ಮುಹೂರ್ತ ನಿಗದಿಪಡಿಸಿದ್ದೇವೆ. ದೇವಿಯ ಅನುಗ್ರಹದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ನಡೆಯುವುದು ಖಚಿತ” ಎಂದು ಹೇಳಿದರು.