ಅಕ್ಟೋಬರ್ 18, 19ರಂದು ಮೈಸೂರು ದಸರಾ ಕಂಬಳ; ಸ್ಥಳ, ದಿನಾಂಕ ಅಂತಿಮ

ಪುತ್ತೂರು,ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಕಂಬಳ ಸ್ಪರ್ಧೆಯು ಅಕ್ಟೋಬರ್ 18 ಮತ್ತು 19ರಂದು ನಡೆಯಲಿದ್ದು, ಕಂಬಳಕ್ಕೆ ಸಂಬಂಧಿಸಿದ ಪ್ರಥಮ ಸಭೆಯಲ್ಲಿ ದಿನಾಂಕ ಹಾಗೂ ಸ್ಥಳವನ್ನು ಅಂತಿಮಗೊಳಿಸಲಾಗಿದೆ ಎಂದು ಕಂಬಳದ ರೂವಾರಿ ಹಾಗೂ ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಶುಕ್ರವಾರ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಂಬಳ ಆಯೋಜನೆ ಕುರಿತಂತೆ ಅಧಿಕಾರಿಗಳು ಹಾಗೂ ಕಂಬಳ ಸಮಿತಿ ಪ್ರಮುಖರು ಭಾಗವಹಿಸಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಸಭೆಯಲ್ಲಿ ಅಕ್ಟೋಬರ್ 18 ಮತ್ತು 19ರಂದು, ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಕಂಬಳ ನಡೆಸಲು ತೀರ್ಮಾನಿಸಲಾಯಿತು.

ಕಂಬಳವನ್ನು ಮೈಸೂರಿನ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಸಮೀಪವಿರುವ ಸುಮಾರು 20 ಎಕರೆ ಪ್ರದೇಶದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆರಂಭದಲ್ಲಿ ಎರಡು ಸ್ಥಳಗಳನ್ನು ಪರಿಶೀಲಿಸಲಾಗಿದ್ದರೂ, 20 ಎಕರೆ ವಿಸ್ತೀರ್ಣದ ಸ್ಥಳವೇ ಕಂಬಳಕ್ಕೆ ಸೂಕ್ತ ಎಂಬ ಅಭಿಪ್ರಾಯಕ್ಕೆ ಸಭೆಯಲ್ಲಿ ಬರಲಾಯಿತು.

ಸುಮಾರು 150 ಜೋಡಿ ಕೋಣಗಳು ಈ ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಜುಲೈ 15ರೊಳಗೆ ಭೂಮಿಪೂಜೆ ನೆರವೇರಿಸಲು ಉದ್ದೇಶಿಸಲಾಗಿದೆ. ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, ಮೈಸೂರು ದಸರಾ ಕಂಬಳದ ಸಂಬಂಧ ನಡೆದ ಪ್ರಥಮ ಸಭೆಯಲ್ಲಿ ದಿನಾಂಕ ಹಾಗೂ ಸ್ಥಳವನ್ನು ಮಾತ್ರ ಅಂತಿಮಗೊಳಿಸಲಾಗಿದೆ. ಕಂಬಳದ ರೂಪುರೇಷೆ, ಸ್ಪರ್ಧೆಯ ವ್ಯವಸ್ಥೆ, ಮೂಲಸೌಕರ್ಯ ಸೇರಿದಂತೆ ಇತರ ಎಲ್ಲಾ ವಿಷಯಗಳ ಕುರಿತು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೂಕೇಶ್ ಕುಮಾರ್, ಮೈಸೂರು ಡಿಸಿಪಿ ಡಾ. ಹರ್ಷಪ್ರಿಯಂವಧ, ಕಂಬಳದ ಸಂಚಾಲಕರಾದ ರಾಜೇಶ್ ಶೆಟ್ಟಿ ಎಡ್ತೂರು, ಗುಣಪಾಲ್ ಕಡಂಬ, ಮುರಳೀಧರ್ ರೈ ಮಠಂತಬೆಟ್ಟು, ಕರಾವಳಿ ಅಸೋಸಿಯೇಷನ್ ಅಧ್ಯಕ್ಷ ಗ್ರಾಸಿಯನ್ ರೋಡ್ರಿಗಸ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಕಂಬಳ ಸಮಿತಿ ಪ್ರಮುಖರು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!