ಚಿಕ್ಕಮಗಳೂರು,:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನೋಂದಣಿ ಹಾಗೂ ಲೆಕ್ಕಪತ್ರಗಳ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಚಿವರು ತಮ್ಮ ಜವಾಬ್ದಾರಿಯ ಅರಿವಿನಿಂದ ನಡೆದುಕೊಳ್ಳಬೇಕು ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮೂಡಿಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಕುರಿತು ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
“ನೀವು ಕರ್ನಾಟಕದ ಏಳು ಕೋಟಿ ಜನರ ಸಚಿವರಾಗಿದ್ದೀರಿ. ಆದರೆ ಆರ್ಎಸ್ಎಸ್ ದೇಶದ 140 ಕೋಟಿ ಜನರ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆ. ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಸಂಘಟನೆಯ ಮುಂದೆ ನಿಂತು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಹೇಳಲು ನೀವು ಯಾರು?” ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ ವಿಶ್ವದ ಸುಮಾರು 140 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಅನಾಥಾಶ್ರಮಗಳು, ಶಾಲೆಗಳು ಹಾಗೂ ಗೋಶಾಲೆಗಳ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದೆ. ಸಂಘವು ನೋಂದಣಿ ಆಗಿಲ್ಲ ಮತ್ತು ಅದನ್ನು ಮಾಡುವ ಅಗತ್ಯವೂ ಇಲ್ಲ. ಇದರಿಂದ ಸಚಿವರಿಗೆ ಏನು ಸಮಸ್ಯೆಯಾಗಿದೆ ಎಂದು ಮುತಾಲಿಕ್ ಪ್ರಶ್ನಿಸಿದರು.
“ಆರ್ಎಸ್ಎಸ್ ಯಾವುದೇ ಕಾನೂನುಬಾಹಿರ ಅಥವಾ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದೆ ಎಂಬುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಒಂದೇ ಒಂದು ಉದಾಹರಣೆ ನೀಡಲಿ” ಎಂದು ಸವಾಲು ಹಾಕಿದ ಅವರು, ಸಂಘವು ಶಿಸ್ತು, ಸ್ವದೇಶಿ ಚಿಂತನೆ ಹಾಗೂ ದೇಶಭಕ್ತಿಯ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ ಎಂದು ಹೇಳಿದರು.
ಸಚಿವರ ಇಂತಹ ಹೇಳಿಕೆಗಳು ಹಾಗೂ ಬೇಡಿಕೆಗಳು ಅಸಂಗತವಾಗಿದ್ದು, ಪ್ರತಿಯೊಬ್ಬರಿಗೂ ತಮ್ಮ ಮಾತು ಮತ್ತು ನಡೆಗೆ ಒಂದು ಮಿತಿ ಇರಬೇಕು. ಅನಗತ್ಯ ವಿವಾದಗಳನ್ನು ಸೃಷ್ಟಿಸುವ ಬದಲು ರಾಜ್ಯದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳತ್ತ ಗಮನಹರಿಸುವುದು ಸೂಕ್ತ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.