ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಕೆಟ್ಟುಹೋದ ರಸ್ತೆ ಮತ್ತು ಚರಂಡಿಗಳ ದುರಸ್ತಿ ಕಾರ್ಯ ನಡೆಯುತ್ತಿರುವ ಸ್ಥಳಗಳಿಗೆ ಆ.3 ದ.ಕ.ಜಿ.ಪಂ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಅವರು ಭೇಟಿ ನೀಡಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖಾ ಅಧಿಕಾರಿಗಳಿಗೆ ಹಾಗೂ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಮಳೆಹಾನಿಗೊಳಗಾದ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸುವಂತೆ ಸೂಕ್ತ ನಿರ್ದೇಶನ ನೀಡಿದರು.

ಅರಿಯಡ್ಕ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಕಾವು- ಈಶ್ವರಮಂಗಲ ರಸ್ತೆ, ಮುಂಡೂರು ಗ್ರಾಮದ ಭಕ್ತಕೋಡಿ-ತಿಂಗಳಾಡಿ- ಸರ್ವೆ ರಸ್ತೆ, ಕೆದಂಬಾಡಿ ರಸ್ತೆ, ನರಿಮೊಗ್ರು ಗ್ರಾಮ ಆನಡ್ಕ ರಸ್ತೆ, ಆರ್ಯಾಪು ಗ್ರಾಮದ ಮಿನಿಪದವು- ಕಾಪಿಕ್ಕಾಡ್ ರಸ್ತೆ ಯ ವೀಕ್ಷಿಸಿದರು.ಬಳಿಕ ಪುತ್ತೂರು ನಗರದ ಶಿವರಾಮ ಕಾರಂತ ಶಾಲೆಯ ಆವರಣ ಗೋಡೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಪಿ.ಆರ್.ಇ.ಡಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ವೇಣುಗೋಪಾಲ್, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ,ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್,ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಭರತ್ ಬಿ.ಎಂ., ಕಿರಿಯ ಇಂಜಿನಿಯರ್ ಕುಷ ಕುಮಾರ್, ಜಾಗೃತಿ, ಸಂದೀಪ್, ಆಯಾಯ ಗ್ರಾಮ ಪಂಚಾಯತ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.


