ಮಂಗಳೂರು, ಆ.4: ಆಟಿಸಂನಿಂದ ಬಳಲುತ್ತಿರುವ ಮಕ್ಕಳ ಹಾಗೂ ನಿರ್ದಿಷ್ಟ ಕಲಿಕಾ ಸಮಸ್ಯೆ (Specific Learning Disability) ಹೊಂದಿರುವ ಮಕ್ಕಳ ಸಮಗ್ರ ಶಿಕ್ಷಣ ಮತ್ತು ಪುನರ್ವಸತಿಗೆ ನೆರವಾಗುವ ಉದ್ದೇಶದಿಂದ ಶಕ್ತಿನಗರದ ಸಾನಿಧ್ಯ ಸಂಸ್ಥೆಯಲ್ಲಿ ‘ಅರ್ಜುನ್ ಶೆಟ್ಟಿ ಸ್ಮರಣಾರ್ಥ ಶಾಲೆ’ಯನ್ನು ಆಗಸ್ಟ್ 8ರಂದು ಉದ್ಘಾಟಿಸಲಾಗುತ್ತಿದೆ.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅರ್ಜುನ್ ಶೆಟ್ಟಿ ಫೌಂಡೇಶನ್‌ನ ಸ್ಥಾಪಕ ಸಿಎ ಸುಧೀರ್ ಶೆಟ್ಟಿ, ತಮ್ಮ ಪುತ್ರ ಅರ್ಜುನ್ ಶೆಟ್ಟಿಯ ಸ್ಮರಣಾರ್ಥ ಈ ಶಾಲೆಯನ್ನು ಆರಂಭಿಸುತ್ತಿದ್ದು, ಇಲ್ಲಿ ಆಟಿಸಂ ಹಾಗೂ ನಿರ್ದಿಷ್ಟ ಕಲಿಕಾ ಸಮಸ್ಯೆ ಹೊಂದಿರುವ ಮಕ್ಕಳಿಗೆ ಅಗತ್ಯವಿರುವ ವಿವಿಧ ಥೆರಪಿಗಳೊಂದಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮುಕ್ತ ಶಾಲೆಗಳ ಸಹಯೋಗದಲ್ಲಿ ಪದವಿ ಪೂರ್ವ ಶಿಕ್ಷಣದವರೆಗೂ ಕಲಿಕಾ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಶಾಲೆಯ ಉದ್ಘಾಟನಾ ಸಮಾರಂಭವು ಆಗಸ್ಟ್ 8ರಂದು ಬೆಳಗ್ಗೆ 9.20ಕ್ಕೆ ನಡೆಯಲಿದ್ದು, ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಶಾಲೆಯನ್ನು ಉದ್ಘಾಟಿಸಲಿದ್ದು, ಸ್ಥಳೀಯ ಶಾಸಕರು, ಸಂಸದರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ ಮಾತನಾಡಿ, 2003ರಲ್ಲಿ ಕೇವಲ ಇಬ್ಬರು ಮಕ್ಕಳು ಮತ್ತು ಒಬ್ಬ ಶಿಕ್ಷಕಿಯೊಂದಿಗೆ ಆರಂಭವಾದ ಸಂಸ್ಥೆಯು ಇಂದು 211 ಮಂದಿ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ವಿಶೇಷ ಶಿಕ್ಷಣ ಹಾಗೂ ತರಬೇತಿ ನೀಡುತ್ತಿದೆ. ಸಂಸ್ಥೆಯಲ್ಲಿ ಸುಮಾರು 75 ಮಂದಿ ವಿಶೇಷ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿಶೇಷ ತಜ್ಞರು, ಮನಶಾಸ್ತ್ರಜ್ಞರು ಹಾಗೂ ಪರಿಚಾರಿಕೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಿಶೇಷ ಶಾಲೆಗಳಿಗೆ ಸರ್ಕಾರ 2024ರಲ್ಲಿ ಅನುದಾನವನ್ನು ಹೆಚ್ಚಿಸಿದ್ದರೂ, ಕಳೆದ ನಾಲ್ಕು ತಿಂಗಳಿನಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ವಿಶೇಷ ಶಿಕ್ಷಕರಿಗೆ ₹20,250, ಶಿಕ್ಷಕೇತರ ಸಿಬ್ಬಂದಿಗೆ ₹13,000 ಹಾಗೂ ವಾಚ್‌ಮನ್‌ಗೆ ₹9,000 ವೇತನ ನೀಡಲಾಗುತ್ತಿದೆ. ಕಡಿಮೆ ವೇತನದ ಕಾರಣ ವಸತಿ ವಿಶೇಷ ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹಾಬಲ ಮಾರ್ಲ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಹಾಗೂ ವೇಣು ಉಪಸ್ಥಿತರಿದ್ದರು.


