ಮಂಗಳೂರು:* ಡಿಸಿ ಮನ್ನಾ ಭೂಮಿ ಹಂಚಿಕೆಗೆ ಸಂಬಂಧಿಸಿದ ನ್ಯೂನತೆಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದಾರೆ ಎಂದು ಡಿಸಿ ಮನ್ನಾ ಭೂಮಿ ಸಮನ್ವಯ ಸಮಿತಿಯ ಪ್ರಮುಖ ಅಶೋಕ್ ಕೊಂಚಾಡಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಸಿ ಮನ್ನಾ ಭೂಮಿ ಹಂಚಿಕೆ ಕುರಿತು ಯಾವುದೇ ಪ್ರಸ್ತಾಪವಾಗದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದವು. ಈ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ ಮುಖಂಡರು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು ಎಂದರು.

ಚರ್ಚೆ ವೇಳೆ ಸಚಿವರು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯೊಂದಿಗೆ ದೂರವಾಣಿಯಲ್ಲಿ ಮಾಹಿತಿ ಪಡೆದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಿಂದ ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿದ ವರದಿ ತರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲೇ ಮಂಗಳೂರಿನಲ್ಲಿ ಕಂದಾಯ ಸಚಿವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕಂದಾಯ ಅಧಿಕಾರಿಗಳ ಸಭೆ ನಡೆಸಲಾಗುವುದು. ಕಾನೂನಿನ ತೊಡಕುಗಳನ್ನು ನಿವಾರಿಸಲು ಸಚಿವ ಸಂಪುಟದ ಅನುಮತಿ ಪಡೆಯಲಾಗುವುದು. ಬಳಿಕ ಮಂಗಳೂರಿನ ಭೂರಹಿತ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸಚಿವರ ಭರವಸೆಯಂತೆ ಒಂದು ತಿಂಗಳು ಕಾಯಲಾಗುವುದು. ಈ ಅವಧಿಯಲ್ಲಿ ಬೇಡಿಕೆ ಈಡೇರದಿದ್ದರೆ ಸಮನ್ವಯ ಸಮಿತಿ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಅಶೋಕ್ ಕೊಂಚಾಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ಪ್ರಮುಖರಾದ ಎಸ್.ಪಿ. ಆನಂದ್, ಗಿರೀಶ್ ಕುಮಾರ್ ಯು.ಕೆ., ಚಂದ್ರಕುಮಾರ್, ಸರೋಜಿನಿ ಬಂಟ್ವಾಳ ಹಾಗೂ ಕೃಷ್ಣಾನಂದ ಉಪಸ್ಥಿತರಿದ್ದರು.

