ಮಂಗಳೂರು: ಎಂಆರ್‌ಪಿಎಲ್ (ಮಂಗಳೂರು ಸಂಸ್ಕರಣಾಗಾರ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಹಾಗೂ ಎಂಎಸ್‌ಇಝಡ್ ಸಂಸ್ಥೆಗಳಿಂದ ಉಂಟಾಗುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ, ‘ಎಂಆರ್‌ಪಿಎಲ್–ಎಂಎಸ್‌ಇಝಡ್ ಗುತ್ತಿಗೆ ಕಾರ್ಮಿಕರ ಹಾಗೂ ಸಂತ್ರಸ್ತರ ಹೋರಾಟ ಸಮಿತಿ’ಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಅಕ್ಟೋಬರ್ 31ರೊಳಗೆ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಸಮಿತಿ ಎಚ್ಚರಿಸಿದೆ.



ಸಮಿತಿಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ವೈದ್ಯಕೀಯ ಸೌಲಭ್ಯ ಹಾಗೂ ತುರ್ತು ಅವಘಡಗಳ ಕುರಿತು ತಕ್ಷಣ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತಪಟ್ಟ ಕೇಶವ ಅವರ ಕುಟುಂಬದ ಸದಸ್ಯರಿಗೆ ಸೂಕ್ತ ಉದ್ಯೋಗ ನೀಡುವುದರ ಜತೆಗೆ ಹೆಚ್ಚುವರಿ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ಭೂಸ್ವಾಧೀನದ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಭೂನಿರ್ವಸಿತರಿಗೆ ಉದ್ಯೋಗ ಕಲ್ಪಿಸಬೇಕು. ಅರ್ಹ ಸ್ಥಳೀಯ ಅಭ್ಯರ್ಥಿಗಳಿಗೆ ನೇರ ಉದ್ಯೋಗಾವಕಾಶ ಮೀಸಲಿಡಬೇಕು. ಇತ್ತೀಚೆಗೆ ಸಂಭವಿಸಿದ ಸ್ಫೋಟದ ಘಟನೆಯಿಂದ ಜೀವಭಯದಲ್ಲಿ ದಿನ ಕಳೆಯುತ್ತಿರುವ ಕಳವಾರದ ನಿವಾಸಿಗಳ ಮನೆ ಹಾಗೂ ಜಮೀನುಗಳನ್ನು ಸರ್ಕಾರಿ ಅಧಿಸೂಚನೆ ಮೂಲಕ ಸ್ವಾಧೀನಪಡಿಸಿಕೊಂಡು, ಎಂಆರ್‌ಪಿಎಲ್ ಸಂಸ್ಥೆಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ.
ಸುತ್ತಮುತ್ತಲಿನ ಗ್ರಾಮಗಳಲ್ಲಿ ಹರಡಿರುವ ಕೊಳಚೆ ನೀರು ಹಾಗೂ ದುರ್ವಾಸನೆಯ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು. ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಶೇ. 75ರಷ್ಟನ್ನು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು. ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಸಮಿತಿ ರಚಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು ಎಂಬ ಬೇಡಿಕೆಗಳನ್ನೂ ಮುಂದಿಡಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಕೊಳಂಬೆ, ದಿನಕರ್ ಶೆಟ್ಟಿ, ಪ್ರಸನ್ನ ರವಿ, ಜೆಡಿಎಸ್ ಯುವ ಮುಖಂಡ ಅಕ್ಷಿತ್ ಸುವರ್ಣ, ರತೇಶ್ ಕರ್ಕೇರ, ಹಿತೇಶ್ ರೈ, ನಾಲ್ಕನೇ ಹಂತದ ಹಿತ ರಕ್ಷಣಾ ಸಮಿತಿಯ ಪ್ರಮುಖರಾದ ಡೋನಿ ಸುವರಿಸ್, ಅಧ್ಯಕ್ಷ ಸುಧಾಕರ್ ಶೆಟ್ಟಿ, ಪ್ರವೀಣ್ ಪೆರ್ಮುದೆ, ಗುರುಮೂರ್ತಿ, ಮಾರ್ಕ್ ಡಿಸೋಜ, ಕೇಶವ ಶೆಟ್ಟಿ, ಎಂಆರ್‌ಪಿಎಲ್ ಮದ್ದೂರು ಸಂಘದ ಪ್ರಮುಖರಾದ ರೋಹಿತಾಶ್ವ, ಜಯಕುಮಾರ್ ಶೆಟ್ಟಿ, ಬಾಳ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಂಕರ್ ಜೋಗಿ, ಕಳವಾರ ಸಂತ್ರಸ್ತರ ಹೋರಾಟ ಸಮಿತಿಯ ಪ್ರಮುಖ ಸಂತೋಷ್ ಕೊರಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.


