ವಡಕರ: ಶಿಕ್ಷಕಿಯರು ಸೇರಿದಂತೆ ಹಲವರು ಆರೋಪಿಗಳಾಗಿರುವ ವಡಕರ MDMA ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದ ಆರ್ಥಿಕ ವಹಿವಾಟಿನ ಹಿನ್ನೆಲೆಯಲ್ಲಿ ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ವಯನಾಡಿನ ಪುಲ್ಪಳ್ಳಿ ನಿವಾಸಿ ಅಜಿತ್ ಹಾಗೂ ಮರಕ್ಕಡವು ನಿವಾಸಿ ವಿಶಾಲ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಪ್ರಕರಣದ 10ನೇ ಮತ್ತು 11ನೇ ಆರೋಪಿಗಳಾಗಿದ್ದಾರೆ.

ಆರೋಪಿಗಳ ಬ್ಯಾಂಕ್ ಖಾತೆಗಳ ಮೂಲಕ ಲಕ್ಷಾಂತರ ರೂಪಾಯಿಗಳ ಹಣಕಾಸಿನ ವಹಿವಾಟು ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ, ವಯನಾಡು ಮೂಲದ ಶಿಂಟೋ ಸದ್ಯ ತಲೆಮರೆಸಿಕೊಂಡಿದ್ದು, ಬಂಧಿತ ಅಜಿತ್ ಮತ್ತು ವಿಶಾಲ್ ಆತನ ಆಪ್ತ ಸ್ನೇಹಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮಾದಕವಸ್ತು ಜಾಲದ ಸಂಪರ್ಕ ಹಾಗೂ ಹಣಕಾಸಿನ ವಹಿವಾಟುಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಕಳೆದ ಜೂನ್ 28ರಂದು ಮುಂಜಾನೆ ಸುಮಾರು 2 ಗಂಟೆಗೆ ವಡಕರದ ಐಸ್ ಪ್ಲಾಂಟ್ ರಸ್ತೆಯ ರೋಲಕ್ಸ್ ಆಯಿಲ್ ಇಂಡಸ್ಟ್ರೀಸ್ ಮುಂಭಾಗದಲ್ಲಿ ಸಫ್ವಾನ್ ಎಂಬ ಯುವಕನನ್ನು MDMA ಸಹಿತ ಪೊಲೀಸರು ಬಂಧಿಸಿದ್ದರು. ಈ ಘಟನೆಯ ತನಿಖೆಯ ವೇಳೆ ಪ್ರಕರಣದಲ್ಲಿ ಶಿಕ್ಷಕಿಯರ ಪಾತ್ರವೂ ಬೆಳಕಿಗೆ ಬಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇರಾಂಬ್ರ BRCಯ ವಿಶೇಷ ಶಿಕ್ಷಕಿಯರಾದ ಮರುತೋಂಕರ ನಿವಾಸಿ ಕೀರ್ತನಾ (31), ಆವಳ ಕುಟ್ಟೋತ್ ನಿವಾಸಿ ವಿ.ಪಿ. ನೀಷ್ಮ (30), ಚೆರವಾಳೂರು ಸರ್ಕಾರಿ LP ಶಾಲೆಯ ಆಟಿಸಂ ಕೇಂದ್ರದ ಶಿಕ್ಷಕಿ, ಕೂರುವಾಚುಂಡ್ ನಿವಾಸಿ ಕೆ. ಕಾವ್ಯ (29) ಹಾಗೂ ಇರಿಟ್ಟಿ ನಿವಾಸಿ ಆನ್ಲೈನ್ ಡೆಲಿವರಿ ಏಜೆಂಟ್ ಜಿಜಿನ್ ಕುರಿಯಾಕೋಸ್ ಸೇರಿದಂತೆ ಹಲವು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು.

ಪ್ರಕರಣದ ಇತರ ಕೆಲವು ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿದೆ. ಪೇರಾಂಬ್ರ BRC ಶಿಕ್ಷಕಿಯರಾದ ಕೀರ್ತನಾ, ನೀಷ್ಮ, ಕಾವ್ಯ ಹಾಗೂ ಐದನೇ ಆರೋಪಿ ಜಿಜಿನ್ ಕುರಿಯಾಕೋಸ್ ಅವರಿಗೆ ವಡಕರ NDPS ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

