ಉಳ್ಳಾಲ: ಕ್ಲಸ್ಟರ್ ಕಿಚನ್ ವ್ಯವಸ್ಥೆಯನ್ನು ವಿರೋಧಿಸಿ, ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಬಿಸಿಯೂಟ ನೌಕರರಿಗೇ ವಹಿಸಬೇಕು ಹಾಗೂ ಪ್ರತಿ ತಿಂಗಳು ಕ್ರಮಬದ್ಧವಾಗಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಬಿಸಿಯೂಟ ನೌಕರರು ನವೆಂಬರ್ 25ರಂದು ಮುಷ್ಕರ ಮತ್ತು ಪ್ರತಿಭಟನೆಗೆ ಕರೆ ನೀಡಿದ್ದರು. ಇದರ ಭಾಗವಾಗಿ ಉಳ್ಳಾಲ ತಾಲೂಕಿನ ನೂರಾರು ಬಿಸಿಯೂಟ ನೌಕರರು ಉಳ್ಳಾಲ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಬೇಡಿಕೆಗಳ ಪರವಾಗಿ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು.


ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕೇಂದ್ರ ಸರ್ಕಾರದ ಯೋಜನೆಯಾದ ಬಿಸಿಯೂಟ ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಸಾವಿರಾರು ನೌಕರರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಗೌರವಧನದ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ಅಗೌರವ ಹಾಗೂ ಅಮಾನವೀಯತೆಯನ್ನು ತೋರುತ್ತಿವೆ ಎಂದು ಟೀಕಿಸಿದರು.


ಮಹಿಳೆಯರನ್ನು ಮಾತೆಯರೆಂದು ಗೌರವಿಸುವುದಾಗಿ ಹೇಳುವ ಸರ್ಕಾರಗಳೇ ಮಹಿಳಾ ಕಾರ್ಮಿಕರನ್ನು ತೀವ್ರವಾಗಿ ಶೋಷಿಸುತ್ತಿವೆ. ಕಠಿಣ ಪರಿಶ್ರಮದಿಂದ ದುಡಿಯುವ ಬಿಸಿಯೂಟ ನೌಕರರಿಗೆ ಕೇವಲ ಗೌರವಧನವಲ್ಲ, ಗೌರವಯುತವಾದ ವೇತನದ ಅಗತ್ಯವಿದೆ. ಅದನ್ನೂ ತಿಂಗಳುಗಟ್ಟಲೆ ವಿಳಂಬವಾಗಿ ಪಾವತಿಸುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ಸುಮಾರು 16 ವರ್ಷಗಳ ಹಿಂದೆ ಶಿಕ್ಷಣ ಇಲಾಖೆಯೇ ಬಿಸಿಯೂಟ ಯೋಜನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ವಹಿಸಬಾರದು ಎಂದು ಸುತ್ತೋಲೆ ಹೊರಡಿಸಿತ್ತು. ಆದರೆ, ಇದೀಗ ಸರ್ಕಾರವೇ ಯೋಜನೆಯನ್ನು ಖಾಸಗೀಕರಣದತ್ತ ಕೊಂಡೊಯ್ಯುತ್ತಿದೆ. ಕ್ಲಸ್ಟರ್ ಕಿಚನ್ ವ್ಯವಸ್ಥೆಯ ಮೂಲಕ ಬಿಸಿಯೂಟ ನೌಕರರ ಬದುಕಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಬಿಸಿಯೂಟ ನೌಕರರು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಗುತ್ತಿರುವ ಅನ್ಯಾಯಗಳ ಕುರಿತು ವಿವರಿಸಿದರು. ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಬಿಸಿಯೂಟ ನೌಕರರ ವೇತನವನ್ನು ಕನಿಷ್ಠ 7,000 ರೂಪಾಯಿಗಳಷ್ಟು ಹೆಚ್ಚಿಸಬೇಕು. ವೇತನವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಪ್ರತಿ ತಿಂಗಳು ಕ್ರಮಬದ್ಧವಾಗಿ ಪಾವತಿಸಬೇಕು. ಕ್ಲಸ್ಟರ್ ಕಿಚನ್ ವ್ಯವಸ್ಥೆಯನ್ನು ಕೈಬಿಟ್ಟು ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ನೌಕರರಿಗೇ ವಹಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಬಿಸಿಯೂಟ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ನಾಯಕರುಗಳಾದ ಜಯಂತ ನಾಯಕ್, ಇಬ್ರಾಹಿಂ ಅಂಬ್ಲಮೊಗರು, ಪ್ರಮೋದಿನಿ ಹಾಗೂ ವಿಲಾಸಿನಿ ಅವರು, ವಿವಿಧ ವಿಭಾಗಗಳ ಕಾರ್ಮಿಕರು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಬಿಸಿಯೂಟ ನೌಕರರ ಸಂಘಟನೆಯ ಉಳ್ಳಾಲ ತಾಲೂಕು ಮುಖಂಡರಾದ ರತ್ನಮಾಲ, ಬಬಿತಾ, ಲತಾ, ವಿದ್ಯಾ, ಗಾಯತ್ರಿ ಹಾಗೂ ನಳಿನಿ ಸೇರಿದಂತೆ ಇತರರು ವಹಿಸಿದ್ದರು.ಬಿಸಿಯೂಟ ನೌಕರರ ವೇತನ ಹೆಚ್ಚಳ, ಸಕಾಲಿಕ ವೇತನ ಪಾವತಿ, ಉದ್ಯೋಗ ಭದ್ರತೆ ಹಾಗೂ ಕ್ಲಸ್ಟರ್ ಕಿಚನ್ ವ್ಯವಸ್ಥೆ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.

