ಕಾಸರಗೋಡು: ವಿವಾದದ ನಡುವೆಯೇ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿದ್ದ ಫೇಸ್ಕ್ರೀಮ್ ಮಾರ್ಕೆಟಿಂಗ್ ಕಚೇರಿಯನ್ನು ಬಂದ್ ಮಾಡಿ ಮಾಲೀಕರು ನಾಪತ್ತೆಯಾಗಿದ್ದಾರೆ. ಡಿಗ್ಮಾ ಮಾರ್ಕೆಟಿಂಗ್ (Digma Marketing) ಹೆಸರಿನಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು.

ಕಚೇರಿಯಲ್ಲಿದ್ದ ಉಪಕರಣಗಳು, ನಾಮಫಲಕ ಸೇರಿದಂತೆ ಹಲವು ವಸ್ತುಗಳನ್ನು ತೆರವುಗೊಳಿಸಲಾಗಿದೆ. ಮಲಪ್ಪುರಂನಲ್ಲಿ ಈ ಸಂಸ್ಥೆಯ ವಿರುದ್ಧ ದೂರುಗಳು ಕೇಳಿಬಂದ ಬೆನ್ನಲ್ಲೇ ಕಚೇರಿಯನ್ನು ಮುಚ್ಚಲಾಗಿದೆ. ಈ ಸಂಬಂಧ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ತನಿಖೆ ಆರಂಭಿಸಿವೆ.

ಕಳೆದ ಮೂರು ದಿನಗಳಿಂದ ಕಚೇರಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ತಿಳಿದುಬಂದಿದೆ. ನಾಲ್ಕು ಶಟರ್ಗಳಿರುವ ಕೊಠಡಿಗಳಲ್ಲಿ ಕಚೇರಿ ನಡೆಸಲಾಗುತ್ತಿತ್ತು. ಇಲ್ಲಿ ಮಹಿಳೆಯರೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಸ್ಥಳೀಯರ ಪ್ರಕಾರ, ಈ ಕಚೇರಿ ಟೆಲಿಕಾಲರ್ ಕೇಂದ್ರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಎಂಟಕ್ಕಿಂತ ಹೆಚ್ಚು ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕಚೇರಿಯಲ್ಲಿ ನೇರವಾಗಿ ಫೇಸ್ಕ್ರೀಮ್ ಮಾರಾಟ ಮಾಡುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕುಂಬ್ಳೆ ಪೊಲೀಸರು ತನಿಖೆ ಆರಂಭಿಸಿದ್ದು, ಸಂಸ್ಥೆಯ ಕಾರ್ಯಚಟುವಟಿಕೆಗಳು ಹಾಗೂ ಮಾಲೀಕರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

