
ಕುಂಬಳೆ : ರಾಜ್ಯಾದ್ಯಂತ ಆರೋಗ್ಯಕ್ಕೆ ಮಾರಕವಾಗಿರುವ ನಕಲಿ ಸೌಂದರ್ಯವರ್ಧಕಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ, ಕುಂಬಳೆಯಲ್ಲಿನ ಫೇಸ್ ಕ್ರೀಂ ವಿತರಣಾ ಜಾಲಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಕಂಟ್ರೋಲ್ ಗುಪ್ತಚರ ದಳವು ತನಿಖೆಯನ್ನು ಚುರುಕುಗೊಳಿಸಿದೆ.

ಬುಧವಾರ ಆರಿಕ್ಕಾಡಿ ಸಮೀಪವಿರುವ ವಿತರಣಾ ಕಂಪನಿಯ ಪಾಲುದಾರನ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ, ದಾಳಿಯ ಸಮಯದಲ್ಲಿ ಪಾಲುದಾರ ಮನೆಯಲ್ಲಿರಲಿಲ್ಲ ಹಾಗೂ ಅಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಕುಂಬಳೆಯ ಶಾಲಾ ರಸ್ತೆಯ ವ್ಯಾಪಾರ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಈ ಸಂಸ್ಥೆಯ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ತನಿಖೆಯನ್ನು ಮುಂದುವರಿಸಲಾಗಿದೆ.

ತನಿಖೆ ತೀವ್ರಗೊಳ್ಳುತ್ತಿದ್ದಂತೆಯೇ ಕಚೇರಿಗಳಿಗೆ ಬೀಗ ಜಡಿದು ಸಿಬ್ಬಂದಿ ಪರಾರಿಯಾಗಿದ್ದಾರೆ. ಈ ಸಂಸ್ಥೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಯುವತಿಯರು ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿಯಿದ್ದು, ಅವರೆಲ್ಲರನ್ನೂ ಪತ್ತೆಹಚ್ಚಿ ಹೇಳಿಕೆ ದಾಖಲಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

