
ಕಾಸರಗೋಡು: ಚಿತ್ತಾರಿ ಸಮೀಪದ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಕಳಿಯಾಟ ಮಹೋತ್ಸವವು ಇಂದಿನಿಂದ ಡಿಸೆಂಬರ್ 1ರ ತನಕ ಐದು ದಿನಗಳ ಕಾಲ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಹಾಗೂ ದೈವಾರಾಧನಾ ಕಾರ್ಯಕ್ರಮಗಳೊಂದಿಗೆ ಭಕ್ತಿ ಭಾವ ವಿಜೃಂಭಣೆಯಿಂದ ನಡೆಯಲಿದೆ.

ಮಹೋತ್ಸವದ ಆರಂಭದ ಅಂಗವಾಗಿ ಇಂದು ರಾತ್ರಿ 7 ಗಂಟೆಗೆ ವಾರಿಕ್ಕಾಟಪ್ಪನ್ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ದೀಪ ಮತ್ತು ಬತ್ತಿಯನ್ನು ತರುವ ಮೂಲಕ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುವುದು.

ಐದು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ದೇವಸ್ಥಾನದ ವ್ಯಾಪ್ತಿಯ ಏಳು ಸ್ಥಳೀಯ ಸಮಿತಿಗಳ ಸಹಕಾರದೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ದೈವಾರಾಧನಾ ಕಾರ್ಯಕ್ರಮಗಳು ಜರುಗಲಿವೆ. ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವಗಳ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ದೇವಾಲಯದ ಪ್ರಚಾರ ಸಮಿತಿ ಕೇಳಿಕೊಂಡಿದೆ.


