ಉಡುಪಿ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಲಯನ್ಸ್ ಡಿಸ್ಟ್ರಿಕ್ಟ್ 317C – ಲಯನ್ಸ್ ಕ್ಲಬ್, ಮಣಿಪಾಲ್, ಮತ್ತು ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಅ. 4ರಿಂದ 12ರವರೆಗೆ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಸಪ್ತಾಹವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಡಿಸ್ಟ್ರಿಕ್ಟ್ 317ಸಿ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಸಪ್ತಾಹದಲ್ಲಿ ಮಕ್ಕಳು, ಮಹಿಳೆಯರು, ವಯಸ್ಕರು, ಉದ್ಯೋಗಿಗಳು ಹಾಗೂ ಹಿರಿಯ ನಾಗರಿಕರನ್ನು ಎಲ್ಲರ ಮಾನಸಿಕ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಅ.4ರಂದು ಬೆಳಿಗ್ಗೆ 10.30ಕ್ಕೆ ಬ್ರಹ್ಮಾವರ ಹಾರಾಡಿಯ ಡಾ. ಎ.ವಿ. ಬಾಳಿಗಾ ಸಮುದಾಯ ಭವನದಲ್ಲಿ ಸಪ್ತಾಹದ ಉದ್ಘಾಟನೆ ನಡೆಯಲಿದ್ದು, ಬಳಿಕ ಅಭಯ ಮತ್ತು ಬಂಧು ಡೇ ಕೇರ್ ಸೆಂಟರ್ ನಲ್ಲಿನ ನಿವಾಸಿಗಳಿಗೆ ಸಮಾಲೋಚನೆ ಮತ್ತು ಸಂವಹನ ಆಟಗಳನ್ನು ಹಮ್ಮಿಕೊಳ್ಳಲಾಗಿದೆ. ಅ. 5ರಂದು ಬೆಳಿಗ್ಗೆ 9.30ಕ್ಕೆ ಶಂಕರಪುರ ರೋಟರಿ ಕ್ಲಬ್ ನಲ್ಲಿ ಮಾನಸಿಕ ಆರೋಗ್ಯ ಶಿಬಿರ ಮತ್ತು ಮಾನಸಿಕ ಆರೋಗ್ಯದಲ್ಲಿ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ. ಅ.6ರಂದು ಮಣಿಪಾಲ ಮಾಧವಕೃಪಾ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ “ಪರೀಕ್ಷಾ ಒತ್ತಡವನ್ನು ನಿಭಾಯಿಸುವುದು ಹಾಗೂ ಗೆಳೆಯರ ಒತ್ತಡವನ್ನು ನಿರ್ವಹಿಸುವುದು” ವಿಷಯದ ಕುರಿತು ಡಾ. ವಿರೂಪಾಕ್ಷ ದೇವರಮನೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅ.7ರಂದು ಮಧ್ಯಾಹ್ನ 2.30ಕ್ಕೆ ಮಣಿಪಾಲ್ ಟೆಕ್ನಾಲಜೀಸ್ ಯುನಿಟ್ 5 ನ ನಳಂದ ಹಾಲ್ ನಲ್ಲಿ ಕಾರ್ಪೋರೇಟ್ ವಲಯದ ಉದ್ಯೋಗಿಗಳಿಗೆ ಒತ್ತಡ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.
ಅ.8ರಂದು ಮಧ್ಯಾಹ್ನ 2.30ಕ್ಕೆ ಮಣಿಪಾಲ ಮಾಧವಕೃಪಾ ಶಾಲೆಯಲ್ಲಿ ಸಂತೋಷದ ಮನಸ್ಸು, ಆರೋಗ್ಯಕರ ಜೀವನ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಸಂಜೆ 4.30ರಿಂದ ಕೆಎಂಸಿ ಸಂವಹನ ಸಭಾಂಗಣದಲ್ಲಿ ಮಹಿಳೆಯರಲ್ಲಿನ ಮಾನಸಿಕ ಆರೋಗ್ಯದ ಕುರಿತು ಮಾಹಿತಿ ಶಿಬಿರ ನಡೆಯಲಿದೆ. ಅ.9ರಂದು ಮಣಿಪಾಲದ ಗ್ರೀನ್ ವ್ಯಾಲಿ ಪ್ಯಾರಡೈಸ್ ನಲ್ಲಿ ಮರೆಗುಳಿತನ ಮತ್ತು ಜೀವನಶೈಲಿ ಮಾರ್ಪಾಡು ಕುರಿತು ಶಿಬಿರ, ಅ.10ರಂದು ಬೆಳಿಗ್ಗೆ 9.30ಕ್ಕೆ ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ಸಭಾಂಗಣದಲ್ಲಿ ‘ವಿಶ್ವ ಮಾನಸಿಕ ಆರೋಗ್ಯ ದಿನದ ಕಾರ್ಯಕ್ರಮ ಹಾಗೂ ಮನೋವಿಜ್ಞಾನ ಮತ್ತು ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅ.11ರಂದು ಬೆಳಿಗ್ಗೆ 7ಗಂಟೆಯಿಂದ ಉಡುಪಿ ಕ್ಲಾಕ್ ಟವರ್ ನಿಂದ ಅಜ್ಜರಕಾಡಿನ ಭುಜಂಗ ಪಾರ್ಕ್ ವರೆಗೆ ವಾಕಥಾನ್ ನಡೆಯಲಿದೆ. ಅ.12ರಂದು ಬೆಳಿಗ್ಗೆ 9.30ಕ್ಕೆ ಮಣಿಪಾಲ ಶಿವಪಾಡಿ ದೇವಸ್ಥಾನದಲ್ಲಿ ಸ್ಲಂ ಮಕ್ಕಳಿಗಾಗಿ ಆಪ್ತ ಸಲಹಾ ಕೇಂದ್ರ ಮತ್ತು ಮಾಸಿಕ ಮಾನಸಿಕ ಆರೋಗ್ಯ ಸಹಾಯವಾಣಿ ಆರಂಭವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ವೈದ್ಯ ಡಾ. ಸುರೇಶ್ ಶೆಣೈ, ಮಣಿಪಾಲ ಲಯನ್ಸ್ ಕ್ಲಬ್ ನ ಅಧ್ಯಕ್ಷ ಗಣೇಶ್ ಪೈ ಉಪಸ್ಥಿತರಿದ್ದರು.