ಪುತ್ತೂರು: ಪುತ್ತೂರು ಟೌನ್ ಬ್ಯಾಂಕ್ನ ಸಣ್ಣ ಕೊಠಡಿಯಲ್ಲಿ ಪುತ್ತೂರು ತಾಲೂಕು ಮಹಿಳೆಯರ ಗ್ರಾಹಕ ಸಹಕಾರಿ ಸಂಘ' ಎಂಬ ಹೆಸರಿನಿಂದ ಆರಂಭಗೊಂಡಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ’ ಇದೀಗ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದೆ. ಡಿ.೩೧ರಂದು ಸುವರ್ಣ ಮಹೋತ್ಸವದ ಉದ್ಘಾಟನೆ ನಡೆಯಲಿದ್ದು, ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಮುಂದೆ ಒಂದು ವರ್ಷ ಪ್ರತಿ ತಿಂಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಘದ ಹಿರಿಯರು, ಮಾಜಿ ನಿರ್ದೇಶಕಿ ವತ್ಸಲಾ ರಾಜ್ನಿ ಮತ್ತು ಅಧ್ಯಕ್ಷೆ ಗೌರಿ ಬನ್ನೂರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸುವರ್ಣ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ ಗಂಟೆ ೯.೩೦ಕ್ಕೆ `ಸ್ವಸ್ಥ ಸಮಾಜಕ್ಕೆ ಮಹಿಳೆಯರ ಸಹಕಾರ’ ಎಂಬ ವಿಚಾರದಲ್ಲಿ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳಗ್ಗೆ ೧೧.೩೦ಕ್ಕೆ ಸಭಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಧ್ವಜಾರೋಹಣ ಮಾಡಲಿದ್ದಾರೆ. ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸುವರ್ಣ ಮಹೋತ್ಸವ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಸಹಕಾರ ಜ್ಯೋತಿ ಮಹಿಳಾ ಸ್ವಸಹಾಯ ಸಂಘಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಧನಾದೇಶ ವಿತರಣೆ ಮಾಡಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ. ರಘು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಘದ ಬೆಳವಣಿಗೆ ೧೯೭೫-೭೬ರ ಅಂತಾಷ್ಟ್ರೀಯ ಮಹಿಳಾ ವರ್ಷದ ಸಂದರ್ಭದಲ್ಲಿ ಪುಷ್ಪಾ ರೈ ಮತ್ತು ತಂಡದವರ ದೂರದೃಷ್ಟಿಯ ಫಲವಾಗಿ ಅಂದಿನ ಪುತ್ತೂರು ತಾಲೂಕಿನ ೫೮ ಗ್ರಾ.ಪಂ.ಗಳ ೭೦೮ ಸದಸ್ಯರ ೧೬,೨೬೦ ಪಾಲು ಬಂಡವಾಳ ಹಾಗೂ ಸರಕಾರದ ಪಾಲು ಬಂಡವಾಳವಾಗಿ ರೂ.೧೦ ಸಾವಿರದೊಂದಿಗೆ ಪುತ್ತೂರು ಟೌನ್ ಬ್ಯಾಂಕ್ನ ಸಣ್ಣ ಕೊಠಡಿಯಲ್ಲಿ ಆರಂಭವಾದ ಸಂಘ ನಿರಂತರ ಪ್ರಗತಿ ಸಾಧಿಸಿ ಬಳಿಕ ಸ್ವಂತ ನಿವೇಶನದಲ್ಲಿ ಹಲವು ಶಾಖೆಗಳನ್ನು ತೆರೆದು ಇದೀಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. ಪ್ರಾರಂಭದ ದಿನ ತಾಲೂಕಿನ ಏಕೈಕ ಮಹಿಳಾ ಸಹಕಾರಿ ಸಂಘವಾಗಿ ಅಚಲವಾದ ತಳಪಾಯದೊಂದಿಗೆ ಕಾರ್ಯಾರಂಭ ಮಾಡಿದ್ದ ಈ ಸಂಸ್ಥೆಯು ಕಳೆದ ೫ ದಶಕಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ೩,೬೦೬ ಸದಸ್ಯರ ವಿಶ್ವಾಸಾರ್ಹ ಶಕ್ತಿಯೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಾಧನೆಗೈಯುತ್ತಾ ಮುನ್ನಡೆಯುತ್ತಿದೆ.
ಸಂಘವು ಲಾಭಕ್ಕಿಂತ ಹೆಚ್ಚು ಸೇವೆಯನ್ನು ಧ್ಯೇಯ ಎಂಬ ನೆಲೆಯಲ್ಲಿ ಕೆಲಸ ಮಾಡುತ್ತಿದೆ. ಆರಂಭದ ದಿನದಲ್ಲಿ ದರ್ಬೆಯಲ್ಲಿ ೫ ಸೆಂಟ್ಸ್ ನಿವೇಶನ ಪಡೆದು ಅಲ್ಲಿನ ಕಟ್ಟಡದಲ್ಲಿ ಬ್ಯಾಂಕ್ ವಿಭಾಗ ತೆರಯಲಾಗಿದೆ.
ದಶಮಾನೋತ್ಸವ ಸಂದರ್ಭದಲ್ಲಿ ಮೊಳಹಳ್ಳಿ ಶಿವರಾಯ ವೃತ್ತದ ಬಳಿ ೪ ಸೆಂಟ್ಸ್ ಜಾಗದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಲ್ಲಿ ಬ್ಯಾಂಕಿAಗ್ ಅಲ್ಲದೆ ಸದಸ್ಯರ ಅನುಕೂಲಕ್ಕಾಗಿ ಜವುಳಿ ಮಳಿಗೆ, ಲೇಖನ ಸಾಮಾಗ್ರಿ, ಗ್ರಾಹಕ ಸಾಮಾಗ್ರಿಗಳ ವಿತರಣೆ, ನ್ಯಾಯಬೆಲೆ ಅಂಗಡಿ ಹಾಗು ಇ-ಸ್ಟ್ಯಾಂಪಿAಗ್ ಸೇವೆ ಇದೆ. ೧೯೮೮-೮೯ರಲ್ಲಿ ಕಬಕ ಗ್ರಾಮದ ನೆಹರುನಗರದಲ್ಲಿ ಮತ್ತೊಂದು ನ್ಯಾಯಬೆಲೆ ಅಂಗಡಿ ಪ್ರಾರಂಭ, ಸಂಘಕ್ಕೆ ೨೫ ವರ್ಷದ ತುಂಬಿದಾಗ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲಿನಲ್ಲಿ ೪ ಸೆಂಟ್ಸ್ ಜಾಗ ಮಂಜೂರು, ೨೦೧೫-೧೬ನೇ ಸಾಲಿನಲ್ಲಿ ಉಪ್ಪಿನಂಗಡಿಯಲ್ಲಿ ಶಾಖೆ ಆರಂಭ, ೨೦೨೩-೨೪ರಲ್ಲಿ ಕಾಣಿಯೂರಿನಲ್ಲಿ ಸಂಘದ ೫ನೇ ಶಾಖೆ ಪ್ರಾರಂಭ ಆಗಿದೆ. ಇದೀಗ ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ರೂ.೧೧೧.೩೩ ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟು ನಡೆಸಿರುವ ಸಂಘವು ಸುವರ್ಣ ಸಂಭ್ರಮ ಮಹೋತ್ಸವದ ಸಂದರ್ಭದಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಡಿಸೆಂಬರ್ ೨೦೨೫ರವರೆಗಿನ ೯ ತಿಂಗಳುಗಳ ಅವಧಿಯಲ್ಲಿ ರೂ.೯೬.೭೧ ಕೋಟಿ ವ್ಯವಹಾರ ನಡೆಸಿ ಆರ್ಥಿಕವಾಗಿ ಸದೃಢವಾಗಿ ಬೆಳೆದಿದೆ. ಸಂಘದ ಎಲ್ಲಾ ಚಟುವಟಿಕೆಗಳು ಸಂರ್ಪೂವಾಗಿ ಮಹಿಳಾ ಸದಸ್ಯರಿಂದಲೇ ಅತ್ಯಂತ ಸಮರ್ಥವಾಗಿ ನಿರ್ವಹಿಸಲ್ಪಡುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಇಂದಿರಾ ಬಿ.ಕೆ, ನಿರ್ದೇಶಕರಾದ ಮೋಹಿನಿ ಪಿ. ನಾಯ್ಕ, ಜಯಶ್ರೀ ಎಸ್. ಶೆಟ್ಟಿ, ಉಷಾ ಮುಳಿಯ, ವಿಜಯಲಕ್ಷ್ಮೀ, ದೀಕ್ಷಾ ಪೈ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಎಸ್. ಉಪಸ್ಥಿತರಿದ್ದರು.