ಬದಲಾದ ಬದುಕು
ಆಗ ಅವಳಿಗೆ ಆರು ವರುಷ ಅವಳ ಅಜ್ಜ ಆವತ್ತು ತೀರಿಕೊಂಡಿದ್ದರು.ಅಜ್ಜ ಅಂದರೆ ತಾಯಿಯ ತಂದೆ.ಸಾವಿನ ಮನೆಯಲ್ಲಿ ಎಲ್ಲರೂ ಅಳುತ್ತಿದ್ದರು.ಅವಳು ತುಂಬಾನೇ ಹೆದರಿ ಹೋಗಿದ್ದಳು.ಅಜ್ಜ ತೀರಿಕೊಂಡರು ಇನ್ನು ನನ್ನ ಅಮ್ಮನಿಗೆ ಏನು ಆಗುತ್ತೋ… ಅಜ್ಜನ ಸಾವಿನ ನೋವಲ್ಲಿ ನನ್ನ ಅಮ್ಮನಿಗೆ ಏನಾದರೂ ಸಂಭವಿಸಬಹುದೋ ಅನ್ನೋ ಭಯ ಈ ಪುಟ್ಟ ಮನಸನ್ನು ಕಾಡುತ್ತಾ ಇತ್ತು.ಅಷ್ಟೇ ಅಲ್ಲ ಕೈಕಾಲು ನಡುಕ…ಹೊಟ್ಟೆ ತೊಳೆಸಿದಂತೆ ಅನುಭವ…ಮೈಯೆಲ್ಲ ತಣ್ಣಗಾಗಿ ನಾನೇಕೆ ಈ ಭೂಮಿ ಮೇಲೆ ಬದುಕಿರುವೆ ಅನ್ನೋ ಭಾವನೆ.ಏನೋ ಒಂಥರಾ ಹೇಳೋಕೆ ಆಗದೇ ಇರುವಂಥ ಪರಿಸ್ಥಿತಿ ಆ ಪುಟ್ಟ ಮನಸಿಗೆ. ಈ ಅನುಭವ ಆ ಪುಟ್ಟ ಮನಸಲ್ಲಿ ಹದಿಹರೆಯದವರೆಗೆ ಹಾಗೆಯೇ ಸಾಗಿತ್ತು.ನಿದ್ದೆ ಇಲ್ಲದ ಅದೆಷ್ಟೋ ರಾತ್ರಿಗಳನ್ನು ಈ ಮಗು ಕಳೆದದ್ದು ಇದೆ.ನಿಜ ಹೇಳಬೇಕು ಅಂದರೆ ಬುದ್ಧಿ ಬಂದ ನಂತರ ಈ ಮಗು ಖುಷಿಯನ್ನೇ ಕಂಡಿಲ್ಲ.ಒಂಥರಾ ಖುಷಿ ಅನಿಸಿದಾಗ ಒಮ್ಮೆಲೇ ಮನಸು ಕತ್ತಲೆಗೆ ಜಾರುತ್ತಿತ್ತು.
ಚಿಕ್ಕ ಚಿಕ್ಕ ವಿಷಯಕ್ಕೆ ನಕಾರಾತ್ಮಕ ಯೋಚನೆಗಳೇ ಆ ಮಗುವಿನ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿತ್ತು.ಅದೊಂದು ದಿನ ಇದ್ದಕ್ಕಿದ್ದಂತೆ ಅವಳು ಖಿನ್ನತೆಗೆ ಜಾರಿದಳು.ಹಸಿವಿಲ್ಲ, ನಿದ್ದೆ ಇಲ್ಲ, ಓಡಿ ಹೋಗೋಣ ಅಂತ ಅನಿಸುವಷ್ಟು ಸಹಿಸಿಕೊಳ್ಳಲು ಆಗದೇ ಇರುವ ತಲೆನೋವು,ಯಾವುದರಲ್ಲೂ ಆಸಕ್ತಿ ಇಲ್ಲದೇ ಇರುವುದು, ಇಡೀ ದಿನ ಅಳುವುದು,ಆತ್ಮಹತ್ಯೆಯ ಪ್ರಯತ್ನ ಮಾಡುವುದು.ಇದೆಲ್ಲದರಿಂದ ಸೊರಗಿ ಹೋಗಿತ್ತು ಆ ಹದಿನೇಳು ವರುಷದ ಮಗುವಿನ ಮನಸ್ಸು.ಮನೋವೈದ್ಯರು ಕೊಟ್ಟ ಮಾತ್ರೆಯನ್ನು ವರುಷಾನುಗಟ್ಟಲೆ ತಿಂದು ನೊಂದು ಹೋಗಿತ್ತು ಆ ಜೀವಕ್ಕೆ. ಔಷಧಿ ತೆಗೆದುಕೊಳ್ಳದೇ ಇದ್ದರೆ ಮತ್ತದೇ ಸಮಸ್ಯೆ.ಇದರಿಂದ ಬೇಸತ್ತ ಆ ಮುಗ್ಧ ಮನಸು ಪರಿಹಾರಕ್ಕಾಗಿ ಬೇರೆ ಬೇರೆ ದಾರಿಯ ಕಾಣಲು ಹುಡುಕಾಡಿತು. ಎಲ್ಲಾ ಪ್ರಯತ್ನಗಳಲ್ಲೂ ಸೋಲನ್ನು ಕಂಡ ಅವಳಿಗೆ.ದೇವರ ಲೀಲೆಯಂತೆ ಆಧ್ಯಾತ್ಮ ಗುರುಗಳ ಭೇಟಿ ಮಾಡ್ತಾಳೆ.ಅಂದಿನಿಂದ ಅವಳ ಜೀವನವೇ ಬದಲಾಗುತ್ತೆ.ಅವಳು ಇವತ್ತು ಮಾತ್ರೆಯನ್ನು ಬಿಟ್ಟಿಲ್ಲ.ಆದರೆ ಮನಸಿಗೆ ಬರುವ ನಕಾರಾತ್ಮಕ ಯೋಚನೆಗಳಿಂದ ಮುಕ್ತಿ ಹೊಂದಿದ್ದಾಳೆ.
ತನಗೆ ಬೇಡದೆ ಇರುವ ವಿಷಯಗಳನ್ನು ಮನಸ್ಸಿನಿಂದ ಕಿತ್ತು ಹಾಕುವುದು ಹೇಗೆ ಎಂದು ಕಲಿತಿದ್ದಾಳೆ.ಅವಳಿಗೆ ಯಾವುದೋ ಜನ್ಮದ ಕಾರಣಗಳಿಂದ ಈ ಸಮಸ್ಯೆ ಬಂದಿರಬಹುದು.ಇವತ್ತು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಿ ಎಲ್ಲದಕ್ಕೂ ಕಾರಣ ನಮ್ಮ ಮನಸ್ಸು ಅನ್ನುವ ಸತ್ಯವನ್ನು ಅರ್ಥಮಾಡಿಕ್ಕೊಂಡಿದ್ದಾಳೆ.ನಿಜ ಹೇಳಬೇಕು ಅಂದರೆ ಇಡೀ ಬ್ರಹ್ಮಾಂಡದಲ್ಲಿ ನಮ್ಮ ಮನಸ್ಸಿಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ.ಯಾರು ಕೂಡಾ ಯಾವ ಕಾರಣಕ್ಕೂ ಆತ್ಮಹತ್ಯೆಯ ಯೋಚನೆ ಮಾಡಬೇಡಿ.ಯಾಕೆಂದರೆ ಆತ್ಮಹತ್ಯೆ ಮಾಡಿ ನಾವು ಈ ಭೂಮಿಯಿಂದ ಹೊರಟು ಹೋದರೆ ಮತ್ತೆ LKG ಯಿಂದ ಮತ್ತೆ ಶಾಲೆಗೆ ಹೋಗಬೇಕು.ಆದಕಾರಣ ದೇವರು ನಮಗಾಗಿ ಕೊಟ್ಟ ಬೆಲೆಕಟ್ಟಲ್ಲಾಗದ ಈ ದೇಹವನ್ನು ಬೆಲೆ ಇಲ್ಲದ ಹಾಗೆ ಮಾಡಬೇಡಿ. ಈ ಸುಂದರವಾದ ಬದುಕನ್ನು ಖುಷಿಯಿಂದ ಖುಷಿಯಾಗಿ ನಗುನಗುತಾ ಬದುಕಿ.
✍🏻✍🏻ಸೌಮ್ಯ ಕಳಿಯೂರ್