ಪ್ರಕೃತಿ ಮಾತೇ

ಏನೇ ನೋವು, ಸಂಕಟ, ಸಂತೋಷ ಇದ್ದರೂ ನಾವು ಹಂಚಿಕೊಳ್ಳುವುದು ಅಮ್ಮನಲ್ಲಿ, ಅವಳು ನಮ್ಮನ್ನು ಹೊತ್ತು ಹೆತ್ತು ಸಲಹಿರುತ್ತಾಳೆ, ನಮ್ಮ ಸರ್ವಾಂಗೀಣ ಬೆಳವಣಿಗೆ ಕಾರಣಳಾಗಿರುತ್ತಾಳೆ.ಅವಳಂತೆ ನಮ್ಮ ಮೊದಲ ಉಸಿರಿನಿಂದ ಕೊನೆಯ ಉಸಿರಿನ ವರೆಗೆ ನಮ್ಮ ಉಳಿವಿಕೆ, ಅಳಿವಿಕೆ,ಜೀವಂತಿಕೆಗೆ ಕಾರಣಳಾದವಳು ಪ್ರಕೃತಿ ಮಾತೆ. ಅಮ್ಮನಂತೆ ಅವಳ ಮಡಿಲಲ್ಲಿಯೂ ನಾವು ನಮ್ಮ ಕಷ್ಟಗಳನ್ನು ಮರೆಯುತ್ತೇವೆ. ಆ ದಿನ ಸುಂದರ ಪ್ರಕೃತಿಯನ್ನು ನೋಡಿ ನಾನು ಇಂತಹ ಯೋಚನೆಯಲ್ಲಿ ಕಳೆದುಹೋದೆ.


ವಸಂತ ಪಂಚಮಿ ಕಳೆದು ಎರಡೋ ಮೂರೋ ದಿನಗಳು ಆಗಿದ್ದವು, ಆ ದಿನ ನಾನು ಬೆಂಗಳೂರಿಗೆಂದು ಹಾಸನ ಮಾರ್ಗವಾಗಿ ಹೋಗುತ್ತಿದ್ದೆ. ಗುಂಡ್ಯದಲ್ಲಿ ಘಾಟ್ ಸೆಕ್ಷನ್ ಶುರುವಾದಂತೆ ಹರಿಯುತ್ತಿರುವ ಕೆಂಪು ನದಿ, ನನ್ನನ್ನು ಪ್ರಕೃತಿಗೆ ಸ್ವಾಗತಿಸಿತು .ಬಸ್ಸಿನಿಂದ ಕುಳಿತು ಕಣ್ಣೆತ್ತಿ ನೋಡಿದರೆ ದೂರದಿಂದ ಝರಿ ಇಳಿಯುತ್ತಿತ್ತು, ಅದು ಸುಮಾರು ದೂರದವರೆಗೆ ಜುಳು ಜುಳು ಹರಿಯುತ್ತಾ ಸಾಗುತ್ತಾ ಇತ್ತು. ನಾಲ್ಕಾರು ಜನ ಅದರಲ್ಲಿ ಆಟವಾಡುವುದನ್ನು ನೋಡಿದೆ. ನನಗೆ ಬಾಲ್ಯದ ನಮ್ಮ ದಿನಗಳು ನೆನಪಾಯಿತು. ಅವುಗಳು ಎಂತಹ ದಿನಗಳು!!
ನಮಗೆ ದಸರಾ ರಜೆ ಒಂದು ತಿಂಗಳು ಸಿಗುತ್ತಿತ್ತು, ಆ ಸಮಯದಲ್ಲಿ ಝರಿ,ತೊರೆಗಳಲ್ಲಿ ನೀರು ಹರಿಯುತ್ತಾ ಇರುತ್ತಿತ್ತು. ನಮ್ಮ ತೋಟದಲ್ಲಿ ಒಂದು ಝರಿ ಇತ್ತು, ಅದರ ಕೆಳಗಡೆ ನೀರಿನ ರಭಸಕ್ಕೆ ಆದಂತಹ ಸಣ್ಣದಾದ ಗುಂಡಿ,ಮುಂದಕ್ಕೆ ತೊರೆಯಾಗಿ ಅದು ಹರಿಯುತ್ತಿತ್ತು. ಎಷ್ಟೋ ಹೊತ್ತುಗಳವವರೆಗೆ ಆ ನೀರಿನಲ್ಲಿ ಕಾಲು ಇಟ್ಟು ಕೂತುಕೊಳ್ಳುದೇನು…ಗುಂಡಿಯಲ್ಲಿ ಮುಳುಗಿ ಏಳುವುದೇನು….


ಇನ್ನು ಬೇಸಿಗೆ ರಜೆ ಎರಡು ತಿಂಗಳುಗಳು, ಗುಂಡಿಯಲ್ಲಿ ನೀರಿರುತ್ತಿರಲಿಲ್ಲ ಆದರೆ ಅದೇ ಗುಂಡಿಯ ಪಕ್ಕದಲ್ಲಿ ಒಂದು ದೊಡ್ಡ ಮಾವಿನ ಮರ, ದಿನ ಪೂರ್ತಿ ಅದೇ ಮಾವಿನ ಮರದ ಕೆಳಗಡೆ ಕಳೆಯುತ್ತಿದ್ದುದು , ಸಿಹಿಯಾದ ಕಾಡು ಮಾವಿನ ಹಣ್ಣು ತಿನ್ನುತ್ತಿದ್ದ ಸಿಹಿ ದಿನಗಳು ಅವು!!
ಘಾಟಿಯ ಇಳಿಜಾರು ಪ್ರದೇಶ ಎಲ್ಲ ದೊಡ್ಡ ದೊಡ್ಡದಾದ ಮರಗಳಿಂದ ಕೂಡಿದ ಕಾಡು, ಹಾಗೂ ತುದಿಯಲ್ಲಿ ಹಸಿರು ಬಣ್ಣದ ಚಾಪೆ ಹಾಸಿರುವ ಬೆಟ್ಟದಂತೆ ಕಾಣುತ್ತಿತ್ತು. ಕಾಡಿನಲ್ಲಿ ಅನ್ಯೋನ್ಯವಾಗಿ ಬೆಳೆದಿರುವಂತಹ ಹಲವು ಜಾತಿಯ ಮರಗಳನ್ನು ಏನೆಂದು ವರ್ಣಿಸಲಿ!! ಕೆಲವು ಚಿಗುರೊಡೆದು ನಿಂತಂತಹ ಮರಗಳಾಗಿದ್ದರೆ, ಇನ್ನು ಕೆಲವು ತನ್ನ ಎಲ್ಲಾ ಎಲೆಗಳನ್ನು ಕಳೆದುಕೊಂಡು ಬೋಳನಂತೆ ನಿಂತಿದ್ದವು. ಗುಲಾಬಿ,ಕಂದು,ತಿಳಿ, ಗಿಳಿ ಹಸಿರು ಬಣ್ಣಗಳ ನಡುವೆ ಅಚ್ಚ ಕೆಂಪು ಬಣ್ಣದ ಚಿಗುರು, ಹೆಣೆದ ಜಡೆಗೆ ಕೆಂಪು ಗುಲಾಬಿ ಹೂ ಇಟ್ಟಂತೆ, ಸೌಂದರ್ಯವನ್ನು ಹೆಚ್ಚಿಸುತ್ತಿತ್ತು. ಪೂರ್ತಿಗೊಂಚಲು ಕೊಡಿನಿಂದ ತುಂಬಿರುವಂತಹ ಸೀಗೆ ಮರಗಳ ನಡು ನಡುವೆ ನಿಂಬೆ ಹಣ್ಣಿನ ಬಣ್ಣದ ಹೂಗಳಿಂದ ತುಂಬಿರುವಂತಹ ಮಾವಿನ ಮರಗಳು. ಮರಗಳಿಗೆಲ್ಲ ಸುತ್ತಿ ಹಬ್ಬಿಕೊಂಡಿರುವಂತಹ ಬಳ್ಳಿಗಳಲ್ಲಿ ಬಿಳಿ, ನೇರಳೆ, ಹಳದಿ,ಗುಲಾಬಿ ಬಣ್ಣಗಳ ಹೂವುಗಳು ಅರಳಿ ನಗೆ ಸೂಸುತ್ತಿದ್ದವು.


ನಾವು ಕೂಡಾ ಇಂತಹ ಪ್ರಕೃತಿಯ ಮಡಿಲಲ್ಲಿ ಊರಿನಲ್ಲಿ ಇದ್ದೆವು. ಅವಳು ನಮ್ಮನ್ನು ಬಿ. ಆರ್. ಲಕ್ಷ್ಮಣ್ ರಾವ್ ಹೇಳಿದಂತೆ ಊರ್ಧ್ವಗಮನಕ್ಕೆ ಇರಬಹುದು ಹಸಿರ ನೀರವ ಪ್ರದೇಶದಿಂದ ಬಿಳಿಯ ಕಾಂಕ್ರೀಟ್ ಕಾಡಿಗೆ ದಬ್ಬಿದ್ದಾಳೆ. ಅಮ್ಮನ ಮಡಿಲಿನಂತೆ ಪ್ರಕೃತಿಯ ಮಡಿಲಲ್ಲಿ ಜೋಗುಳ ಕೇಳುವ ಅವಕಾಶ ಅವಳು ಒದಗಿಸುವಳೆಂಬ ಭರವಸೆ ನಮಗೆ.

ಬರಹ:-✍️ ಭಾರತೀ ನೀರ್ಪಾಜೆ ಹೌಸ್ ಕನ್ಯಾನ ಪೋಸ್ಟ್ ದಕ್ಷಿಣ ಕನ್ನಡ

SHARE
Loading spinner

Leave a Reply

Your email address will not be published. Required fields are marked *

error: Content is protected !!