ಆ ದಿನ ಮನೆ ತುಂಬಾ ಜನ ಸೇರಿದ್ದರು, ಮಕ್ಕಳ ಆಟ ಒಂದು ಕಡೆಯಾದರೆ ಮಾತು ಚೆಲ್ಲಾಟವಾಡುತ್ತಿರುವ ಯುವಕರು ಇನ್ನೊಂದು ಕಡೆ , ಗಂಡಸರ ಓಡಾಟ ಹಾಗೂ ಹೆಂಗಸರ ಹರಟೆ ಜೋರು ನಡೆಯುತ್ತಿತ್ತು. ಆ ದಿನ ಮನೆಯಲ್ಲಿ ಲಕ್ಷ್ಮಿಯ ಸೀಮಂತ ಕಾರ್ಯಕ್ರಮ ಅದರಲ್ಲಿ ಎಲ್ಲರೂ ಸಂಭ್ರಮಿಸುತ್ತಿದ್ದರು . ಲಕ್ಷ್ಮಿಗೆ ಚೊಚ್ಚಲ ಬಸರು,ಸೀಮಂತದ ಪ್ರಯುಕ್ತ ಪೂಜೆ ಹವನ ಹಾಗೂ ಗರ್ಭಿಣಿಯಾದ ಲಕ್ಷ್ಮಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಎಲ್ಲರೂ ಕೊಡುತ್ತಿದ್ದರು . ಮಹಿಳೆಯರೆಲ್ಲ ಅವರವರ ಗರ್ಭಾವಸ್ಥೆಯ ಅನುಭವವನ್ನು ಹೇಳುತ್ತಾ ಲಕ್ಷ್ಮಿಗೆ ಧೈರ್ಯ ತುಂಬುತ್ತಿದ್ದರು. ಏಳು ತುಂಬಿರುವ ಲಕ್ಷ್ಮಿ ಅದೇ ದಿನ ತನ್ನ ತವರಿಗೆ ಹೋಗುವವಳಿದ್ದಳು. ಎರಡು ವರ್ಷದ ಹಿಂದೆ ರಮಣನನ್ನು ಮದುವೆಯಾಗಿ ಬಂದಿದ್ದ ಲಕ್ಷ್ಮಿ ಮನೆಗೆ ಚೆನ್ನಾಗಿ ಹೊಂದಿಕೊಂಡಿದ್ದಳು. ಅತ್ತೆ ಮಾವ ಸ್ವಲ್ಪ ಖಡಕ್ ಆದರೂ ಕೂಡ ಸೊಸೆಯ ಮೇಲೆ ಪ್ರೀತಿ ಏನೂ ಕಡಿಮೆ ಇರಲಿಲ್ಲ. ಗಂಡನ ಪ್ರೀತಿ ಹಾಗೂ ನಾದಿನಿ ಸರೋಜಾ, ಅತ್ತಿಗೆಯ ಮೇಲೆ ಪ್ರಾಣನೇ ಇಟ್ಟಿದ್ದಳು. ಹೀಗಿರುವ ಕಾರಣ ಅವಳಿಗೆ ತನ್ನ ಮನೆಯನ್ನು ಬಿಟ್ಟು ತವರಿಗೆ ಹೋಗುವುದೆಂದರೆ ಸ್ವಲ್ಪ ಬೇಸರವೇ ಇತ್ತು. ಅಳುತ್ತಾ ಹೊರಟ ಲಕ್ಷ್ಮಿಯನ್ನು ರಮಣ ವಾರ ವಾರ ನಾನು ಬರುತ್ತೇನೆ ಏನೂ ಬೇಸರಿಸಬೇಡ ಎಂದು ಧೈರ್ಯ ನೀಡಿ ಕಳಿಸಿಕೊಟ್ಟ.
90ರ ದಶಕದಲ್ಲಿ ಈಗಿನ ತರ ಎಲ್ಲಾ ಮನೆಗಳಲ್ಲಿ ಕಾರು ಇರಲಿಲ್ಲ. ಲಕ್ಷ್ಮಿಯ ಅಪ್ಪ ಬಾಡಿಗೆಗೆ ಕಾರು ತರಿಸಿದ್ದರು. ಅಳುತ್ತಾ ಅದರಲ್ಲಿ ಹತ್ತಿ ಲಕ್ಷ್ಮಿ ತನ್ನ ತವರಿಗೆ ತೆರಳಿದಳು.
ಈಗ ತವರಿಗೆ ಬಂದು ಸುಮಾರು ಒಂದು ತಿಂಗಳು ಆಗಿತ್ತು. ತಾನು ಹುಟ್ಟಿ ಬೆಳೆದ ಮನೆ ಆದರೂ ಲಕ್ಷ್ಮಿಗೆ ಈಗ ತವರಿನಲ್ಲಿ ದಿನ ಕಳೆಯುವುದು ಕಷ್ಟವಾಗಿತ್ತು. ಹೊತ್ತು ಕಳೆಯಲು ಏನಾದರೂ ಕೆಲಸ ಮಾಡೋಣವೆಂದು ಹೊರಟರೆ, ಅಪ್ಪ ಅಮ್ಮ ತಡೆಯುತ್ತಿದ್ದರು. ತಂಗಿ ಲಾವಣ್ಯ ಕಾಲೇಜಿಗೆ ಹೋಗುತ್ತಿದ್ದರಿಂದ ಓದು ಬರೆಯುವುದು ಅದರಲ್ಲೇ ಇರುತ್ತಿದ್ದಳು. ಅಪ್ಪನಿಗೆ ತೋಟದ ಕೆಲಸವಿದ್ದರೆ, ಅಮ್ಮ ಮನೆ ಕೆಲಸದಲ್ಲಿ ತುಂಬಾ ವ್ಯಸ್ತರಾಗಿರುತ್ತಿದ್ದರು.ಹೊಟ್ಟೆಯಲ್ಲಿರುವ ಮಗುವಿನ ತುಳಿತ ಹಾಗೂ ಅದನ್ನು ಇಟ್ಟುಕೊಂಡು ಬೇಕೆಂದಾಗ ಮಲಗಿ ಮಗ್ಗಲು ಬದಲಿಸಲು ಸಾಧ್ಯವಾಗದ ಸ್ಥಿತಿ ಈಗ ಅವಳದಾಗಿತ್ತು. ಗಂಡ ಶನಿವಾರ ಬಂದು ಅವಳನ್ನು ನೋಡಿ ವಿಚಾರಿಸಿ ಭಾನುವಾರ ಹೋಗುತ್ತಿದ್ದ.
ಆ ಒಂದು ಶನಿವಾರ ಬಂದ ರಮಣ ಒಂದು ಶುಭ ಸಮಾಚಾರ ತಂದಿದ್ದ. ತಂಗಿಯನ್ನು ನೋಡಲು ಒಬ್ಬ ಹುಡುಗ ಬಂದಿದ್ದು, ಅವನು ಹಾಗೂ ಅವನ ಮನೆಯವರಿಗೆ ಸರೋಜಾ ಇಷ್ಟವಾಗಿದ್ದಳು, ಎಂದು ಹೇಳುತ್ತಿದ್ದ ಹಾಗೆ ಲಕ್ಷ್ಮಿಯ ಮುಖ ಅರಳಿತು. ಅವಳು ಹುಡುಗ ಹಾಗೂ ಅವರ ಮನೆಯವರ ಬಗ್ಗೆ ತುಂಬಾ ವಿಚಾರಿಸಿದಳು. ಎಲ್ಲಾ ವಿವರಗಳನ್ನು ಹೇಳುತ್ತ ರಮಣ ಕೊನೆಗೆ ಒಂದು ಮಾತು ಹೇಳಿದ ಏನೆಂದರೆ, ಹುಡುಗನ ಅಕ್ಕ ದೂರದ ದೇಶದಲ್ಲಿ ಇರುವುದರಿಂದ ಈಗ ಊರಿಗೆ ಬಂದವರಿದ್ದಾರೆ ತಮ್ಮನ ಮದುವೆಯನ್ನು ನೋಡಿ ಹೋಗಲು ಇಚ್ಚಿಸುತ್ತಿದ್ದಾರೆ, ಹಾಗಾಗಿ ಇನ್ನು 15 ದಿನಗಳಲ್ಲಿ ಮದುವೆ ಮಾಡಿಕೊಡಬೇಕೆಂದು ಹೇಳುತ್ತಿದ್ದಾರೆ ಎಂದು.
ಗಂಡನ ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಆತ್ಮೀಯಳಾಗಿದ್ದವಳು ಸರೋಜಾ. ಅವಳ ಮದುವೆಯಲ್ಲಿಯೂ ತನಗೆ ಓಡಾಡಲು ಸಾಧ್ಯವಾಗುವುದಿಲ್ಲ ಎಂದು ಅವಳಿಗೆ ತುಂಬಾ ಬೇಸರದ ಸಂಗತಿ ಆಗಿತ್ತು. ಅವಳು ಗಂಡನಿಗೆ ಹೇಳಿದಳು “ನೀವೇ ಒಂದು ಮಾತು ಹೇಳಿ, ನಾನು ಮರಳಿ ಮನೆಗೆ ಬಂದ ನಂತರ ಮದುವೆ ಮಾಡುವ ಹಾಗೆ ಮಾತಾಡಿ ನೋಡಿ” ಎಂದು. ರಮಣ ಆಯ್ತು ಎಂದು ಹೇಳಿ ಹೋಗಿದ್ದ, ಆದರೆ ಇದು ನಡೆಯಲಾರದು ಎಂದು ರಮಣ ಹಾಗೂ ಲಕ್ಷ್ಮಿ ಇಬ್ಬರಿಗೂ ತಿಳಿದಿತ್ತು. ತವರು ಮನೆಯಲ್ಲಿ ಇರುವ ಬೇಸರದ ಜೊತೆ ಇನ್ನೊಂದು ದುಃಖದ ಸಂಗತಿಯು ಲಕ್ಷ್ಮಿಯನ್ನು ಈಗ ಕಾಡಲು ತೊಡಗಿತ್ತು. ಯೋಚಿಸುತ್ತಾ ಅವಳು, ಗಂಡನ ಮನೆಯಲ್ಲಿ ಸರೋಜಾ ತನ್ನೊಂದಿಗೆ ಪ್ರೀತಿಯ ತಂಗಿ ಅಂತಿದ್ದಳು. ಮದುವೆಯಾದ ಹೊಸದರಲ್ಲಿ ನಡೆದಂತಹ ಒಂದು ಘಟನೆ, “ಒಮ್ಮೆ ಮನೆಗೆ ತುಂಬಾ ಜನ ಅತಿಥಿಗಳು ಬಂದಿದ್ದರು, ಇನ್ನು ಸರಿಯಾಗಿ ಅಡುಗೆ ಮನೆಯ ಕೆಲಸವನ್ನು ಕಲಿತಿರದ ಲಕ್ಷ್ಮೀ, ಅವರಿಗೆಲ್ಲರಿಗೂ ಕಾಫಿ ಬೆರೆಸಲು ಹೊರಟಾಗ, ತಡವರಿಸುತ್ತಾ ಕೈತಪ್ಪಿ ಹಾಲು ಚೆಲ್ಲಿದಳು, ಅದು ಸುಮಾರು 2 ಲೀಟರ್ ಗಳಷ್ಟಿತ್ತು. ಕೈತಪ್ಪಿ ಜಲ್ಲಿದಾಗ ಅವಳು ನಡುಗುತ್ತಾ ಅಳುತ್ತಾ ಕುಳಿತುಕೊಂಡಳು. ಅದರ ಮೇಲೆ ಅತ್ತೆಯ ಸವಾರಿ “ಏನೇ ಒಂದು ಸ್ವಲ್ಪ ಜೋಪಾನವಾಗಿ ಕೆಲಸ ಮಾಡಬಾರದೇ? ಇನ್ನೀಗ ಬಂದವರಿಗೆ ಕಾಫಿ ಹೇಗೆ ಕೊಡುವುದು? ನೆಂಟರೆದುರು ಮಾನ ಕಲಿತಿಯೇನೆ?” ಮಾವನವರು ಕೂಡ ದೊಡ್ಡದಾಗಿ ಕಣ್ಣು ಹೊರಳಿಸಿದರು. ಅವಳಿಗೆ ಕೈಕಾಲು ನಡುಕ ಶುರುವಾಯಿತು.ಓಡೋಡಿ ಬಂದ ಸರೋಜಾ ಬಂದವಳು ಅಮ್ಮನಿಗೆ ಸಮಾಧಾನ ಹೇಳಿದಳು ಏನಾಯ್ತು ಈಗ ಗೊತ್ತಿಲ್ಲದೆ ಚೆಲ್ಲಿರುವುದಲ್ಲವೇ ಬಿಟ್ಟು ಬಿಡು ಅಮ್ಮ, ನಾನು ಕೆಲವೊಂದು ಸಲ ಈತರ ಮಾಡಲ್ವೇ? ಏನಿದೆ ಮಹಾ ನಾನೇ ಕ್ಲೀನ್ ಮಾಡ್ತೀನಿ, ನಾನೇ ಹತ್ತಿರದ ಅಂಗಡಿಗೆ ಹೋಗಿ ಹಾಲು ತಗೋ ಬರ್ತೀನಿ. ಬೈಬೇಡ ಅತ್ತಿಗೆ ನನ್ನಂತೆ ಅಲ್ಲವೇ ಗದರಬೇಡ” ಎಂದಿದ್ದೂ ಅಲ್ಲದೆ ತಾನೇ ಎಲ್ಲ ಕ್ಲೀನ್ ಮಾಡಿ ತಾನೇ ಹಾಲು ತಗೋ ಬಂದಿದ್ದಳು. ಅತ್ತಿಗೆಗೆ ಪ್ರೀತಿಯಿಂದ ಸಾಂತ್ವನವೂ ಮಾಡಿದ್ದಳು. ಹೆಚ್ಚು ಕಮ್ಮಿ ಸಮವಯಸ್ಕರಾಗಿದ್ದರಿಂದ, ಎಲ್ಲಾ ವಿಚಾರಗಳನ್ನು ಅತ್ತಿಗೆಯೊಂದಿಗೆ ಹಂಚಿಕೊಳ್ಳುತ್ತಿದ್ದಳು. ಅಂತದ್ದರಲ್ಲಿ ಈಗ……. ಲಕ್ಷ್ಮಿಗೆ ಅಳುವೇ ಬರುತ್ತಿತ್ತು.
ಸರೋಜಳಾದರೂ “ಅತ್ತಿಗೆ ಬಂದ ಮೇಲೆ ಮದುವೆ ಆಗಬಹುದು” ಎಂದು ಒಂದು ಮಾತು ಹೇಳಿದಿದ್ದರೆ ಮದುವೆಯಲ್ಲಿ ಭಾಗವಹಿಸುವ ಯೋಗ ತನಗೆ ಲಭಿಸಬಹುದೆಂದುಕೊಂಡಿದ್ದಳು. ಅದು ಯಾವುದು ನಡೆಯಲಿಲ್ಲ, ಮತ್ತಿನ ಸಲ ರಮಣ ಬರುವಾಗ ಕೈಯಲ್ಲಿ ಆಮಂತ್ರಣ ಪತ್ರಿಕೆ ಹಿಡಿದೆ ಬಂದಿದ್ದ. ಬೀಗರ ಮನೆಯವರನ್ನು ಆಮಂತ್ರಿಸಿ ಹೋಗಿದ್ದ. ಒಂದೇ ವಾರದಲ್ಲಿ ಮದುವೆ ಇತ್ತು.
ಲಕ್ಷ್ಮಿಯ ಅಪ್ಪ ಮದುವೆಗೆ ಹೋದವರು, ಬರುವಾಗ ಮದುವೆ ಮನೆಯಿಂದ ಹೋಳಿಗೆ, ಜಿಲೇಬಿ ಮುಂತಾದವುಗಳನ್ನು ಲಕ್ಷ್ಮಿ ಗೆ ಕೊಟ್ಟು ಕಳಿಸಿದ್ದರು. ಅಪ್ಪ ಮದುವೆ ಮುಗಿಸಿ ಮನೆಗೆ ಬಂದದ್ದೇ ಲಕ್ಷ್ಮಿಯ ಪ್ರಶ್ನೆಗಳ ಸುರಿಮಳೆ ಶುರುವಾಯಿತು. “ಹುಡುಗ ಹೇಗಿದ್ದಾನೆ? ಮದುವೆಯಲ್ಲಿ ಎಷ್ಟು ಜನ ಸೇರಿದ್ದರು? ಎಲ್ಲರೂ ನನ್ನನ್ನು ಕೇಳಿದರೆ? ಸರೋಜಾಳ ಸೀರೆ ಯಾವ ಬಣ್ಣದ್ದಾಗಿತ್ತು? ಅಲಂಕಾರವೆಲ್ಲಾ ಹೇಗೆ ನಡೆದಿತ್ತು? ಯಾವ ಯಾವ ಆಭರಣಗಳನ್ನು ಹಾಕಿದ್ದಳು?” ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿದಳು. ಅದಕ್ಕೆ ಅಪ್ಪ, ನಾನು ಹೋದದ್ದೇ ತಡವಾಗಿ, ಜನರ ಮಧ್ಯದಲ್ಲಿ ಎಲ್ಲೋ ದೂರ ಇದ್ದೆ, ಹುಡುಗ ಚೆನ್ನಾಗಿದ್ದಾನೆ, ಸರೋಜಾಳೂ ತುಂಬಾ ಚೆನ್ನಾಗಿ ಕಾಣುತ್ತಿದ್ದಳು. ಆಭರಣದ ಬಗ್ಗೆ ಎಲ್ಲಾ ನನಗೆ ತಿಳಿಯದು. ನಾನು ಅವಳ ಕುತ್ತಿಗೆಯನ್ನು ನೋಡಲಿಲ್ಲ . ಅದನ್ನೆಲ್ಲ ಅಳಿಯ ಬಂದಾಗ ಅವನತ್ರ ಕೇಳು, ಈಗ ನೀನು ಸಿಹಿ ತಿಂಡಿಗಳನ್ನು ತಿನ್ನು ಎಂದರು.
ಮದುವೆಯ ಓಡಾಟದಲ್ಲಿ ರಮಣ ಲಕ್ಷ್ಮಿಯ ತವರಿಗೆ ಬರುವುದು ಈ ಸಲ 15 ದಿನವಾಯಿತು. ಆದರೆ ಬರುವಾಗ ಲಕ್ಷ್ಮಿಗೆ ಮದುವೆ ಎಲ್ಲಾ ವಿಚಾರಗಳು ತಿಳಿಯಲಿ ಎಂದು ಮದುವೆಯ ಆಲ್ಬಮ್ ಅನ್ನು ತಗೊಂಡ್ ಬಂದಿದ್ದ. ಆಸೆ ಹಾಗೂ ಸಂತೋಷದಿಂದ ಕೈಗೆತ್ತಿಕೊಂಡ ಅಲ್ಬಮ್ ಅನ್ನು ಲಕ್ಷ್ಮಿ ಬಿಡಿಸಿದಳು, ಮೊದಲನೇ ಪುಟದಲ್ಲಿ ಮದುಮಗ ಹಾಗೂ ಮದುಮಗಳ ಹೆಸರನ್ನು ಅತಿ ಚಂದವಾಗಿ ಜೋಡಿಸಿದ್ದರು. ಖುಷಿಯಿಂದ ಅದನ್ನು ಒಂದೆರಡು ನಿಮಿಷ ನೋಡಿ ಮುಂದಿನ ಪುಟ ಬಿಡಿಸಿದಳು. ಸರೋಜಾ ಒಬ್ಬಳೇ ನಿಂತು ಇರುವ ಒಂದೆರಡು ಫೋಟೋಗಳು ಇದ್ದವು. ಅದರಲ್ಲಿ ಅವಳ ಸೀರೆ, ಅದರ ಬಣ್ಣ ಹಾಗೂ ಅವಳ ಆಭರಣಗಳನ್ನು ನೋಡಲಾರಂಭಿಸಿದಳು. ನೋಡ ನೋಡುತ್ತಿದ್ದಂತೆ ಅವಳ ಕಣ್ಣು ಸರೋಜಾಳ ಕತ್ತಿನಲ್ಲಿರುವ ಮುತ್ತಿನ ಹಾರದ ಮೇಲೆ ಬಿತ್ತು. “ಅರೆ…! ನನ್ನ ಮುತ್ತಿನ ಸರದಂತಿರುವ ಸರವನ್ನೇ ಸರೋಜಾಳಿಗೆ ಮಾಡಿಸಿದ್ದೀರಾ?” ಎಂದು ಗಂಡನಲ್ಲಿ ಕೇಳಿದಳು. ಹೌದು ಎನ್ನುವ ಹಾಗೆ ಗಂಡ ತಲೆಯಲ್ಲಾಡಿಸಿದ. ಗಂಡನ ಸಂಪಾದನೆ ಎಷ್ಟು ಎಂದು ಅವಳಿಗೆ ಗೊತ್ತಿತ್ತು, ಅಲ್ಲದೆ ಮಾವನವರೂ ಕೂಡಿಟ್ಟಿದ್ದು ಅಷ್ಟೇ ಇತ್ತು, ಯಾಕೆಂದರೆ ಅವರ ಕಲ್ಯಾಣ ಗುಣಗಳು ಅವಳಿಗೆ ತಿಳಿದಿತ್ತು. ಹೀಗಿರುವಾಗ ಹಾರ ಎಲ್ಲಿಂದ ಮಾಡಿರಬೇಕು? ಯೋಚನೆ ಮಾಡುತ್ತಾ
ಅವಳು ಮತ್ತೆ ಪುನಃ ಅದೇ ಸರವನ್ನು ಗಮನವಿಟ್ಟು ನೋಡಿದಳು, ಇದು ಬೇರೆ ಸರವಲ್ಲ ತನ್ನದೇ ಸರವೆಂದು ಅವಳಿಗೆ ತಿಳಿಯಿತು.
“ಅಲ್ಲ ಅಲ್ಲ ಇದು ನನ್ನದೇ ಸರ!!!, ಅದನ್ನು ಯಾಕೆ ಅವಳಿಗೆ ಕೊಟ್ಟೀರೀ?” ಎಂದು ಗಂಡನನ್ನು ಪ್ರಶ್ನಿಸಿದಳು. ಅವನು ಮೌನವಾಗಿ ತಲೆ ಕೆಳಗಾಕಿದ. ಮತ್ತೆ ಮತ್ತೆ ಯಾಕೆ ಹೀಗೆ ಮಾಡಿದಿರಿ? ಯಾಕೆ ಹೀಗೆ ಮಾಡಿದಿರಿ? ಎಂದು ಪ್ರಶ್ನಿಸಿದಳು. ತುಂಬಾ ಸಲ ಕೇಳಿದಾಗ ಅವನು ಉತ್ತರಿಸಿದ “ಗಂಡಿನ ಕಡೆಯವರು 15 ಸವರನ್ ಚಿನ್ನ ಹಾಕಬೇಕೆಂದು ಹೇಳಿದ್ದರು, ಅಷ್ಟಕ್ಕೆ ಸ್ವಲ್ಪ ಕಡಿಮೆ ಬಂದದ್ದರಿಂದ ಬೇರೆ ಎಲ್ಲೂ ಹೊಂದಾಣಿಕೆ ಮಾಡಲು ಸಾಧ್ಯವಾಗದೆ ಅದನ್ನೇ ಕೊಡಬೇಕಾಗಿ ಬಂತು” ಲಕ್ಷ್ಮಿಗೆ ದುಃಖ ತಡೆಯಲಾಗಲಿಲ್ಲ, ಜೋರು ಅಳಲಾರಂಭಿಸಿದಳು. ಯಾಕೆ ಅದನ್ನು ಕೊಟ್ಟಿರಿ? ನನ್ನ ಅಪ್ಪ ನನಗೆ ಮಾಡಿಸಿ ಕೊಟ್ಟಿದ್ದು ಎಂದು ಅಳುತ್ತಾ ಗಂಡನನ್ನು ಕೇಳಿದಳು. ಗಂಡನಲ್ಲಿ ಅದಕ್ಕೆ ಉತ್ತರವಿರಲಿಲ್ಲ. ಅಪ್ಪ ಅಮ್ಮನ ಎದುರು ಜಗಳ ಬೇಡ ಎಂದು ಅವಳು ಸುಮ್ಮನೆ ತನ್ನ ಕೋಣೆಗೆ ಹೋಗಿ ಅಳುತ್ತಾ ಕುಳಿತಳು.
ರಾತ್ರಿ ಊಟದ ಹೊತ್ತಾದರೂ ಲಕ್ಷ್ಮಿ ಊಟಕ್ಕೆ ಬರಲಿಲ್ಲ. ಮನೆಯವರೆಲ್ಲ ಕರೆದರೂ ಊಟಕ್ಕೆ ಅವಳು ಬರಲೇ ಇಲ್ಲ. ಇದನ್ನು ನೋಡಿ ಗಂಡ ರಮಣನೇ ಊಟ ತಂದು ಬಾಯಿಗೆ ತಿನ್ನಿಸಲು ನೋಡಿದ. ಆದರೂ ಅವಳು ಊಟ ಬೇಡ ಎಂದು ಹಠ ಹಿಡಿದಳು.
ಮತ್ತೆ ಅದೇ ಪ್ರಶ್ನೆ, ನನ್ನಪ್ಪ ನನಗೆಂದೇ ಅಕ್ಕಸಾಲಿಗನಲ್ಲಿ ಹೋಗಿ ಮುತ್ತುಗಳನ್ನು ಆಯ್ದು ತನಗೆ ಬೇಕೆಂಬಂತೆ ಪೋಣಿಸಿದ ಸರ ಅದು, ಅದನ್ನು ಕೊಡಲು ಹೇಗಾದರೂ ಮನಸ್ಸು ಬಂತು ನಿಮಗೆ? ಒಂದು ಮಾತು ನನ್ನನ್ನು ಕೇಳಬೇಕಂದನಿಸಲಿಲ್ಲವೇ? ಎಂದು ಕೇಳಿದಳು. ಸರೋಜಾಳಿಗೆ ಅದು ಅಂದರೆ ತುಂಬಾ ಇಷ್ಟವಿತ್ತು, ಅವಳೇ ನನಗೆ ಕೊಡು ಎಂದು ಕೇಳಿದಳೇ? ಇಲ್ಲ ನಿಮ್ಮ ಅಮ್ಮ ಇದನ್ನು ಹಾಕೋಣ ಎಂದು ಹೇಳಿದರೇ? ಹೀಗೆ ಅಳುತ್ತಾ ಹಲವಾರು ಪ್ರಶ್ನೆಗಳನ್ನು ಕೇಳಿದಳು. ರಮಣ್ಣ ತಪ್ಪಾಯ್ತು ಕ್ಷಮಿಸು ಎಂದು ಹೇಳಿದರೂ ಅವಳು ಕೇಳಲಿಲ್ಲ. ಕೊನೆಗೆ, “ಆಯ್ತು ನಿನಗೆ ಮುತ್ತಿನ ಸರ ತಾನೇ ನಾನು ಬೇರೆ ಮಾಡಿರಿಸಿಕೊಡುತ್ತೇನೆ” ಅಂದ. ಅದಕ್ಕೆ ಲಕ್ಷ್ಮೀ “ನನಗೆ ಬೇರೆ ಯಾವುದೂ ಬೇಡ ನನಗೆ ನನ್ನ ಸರವೇ ಬೇಕು” ಎಂದಳು. ಇನ್ನು ರಮಣ್ಣನಲ್ಲಿ ಉತ್ತರವಿರಲಿಲ್ಲ ಅವನು ಸುಮ್ಮನಾದ, ಲಕ್ಷ್ಮಿ ಅಳುತ್ತಾ ಎಷ್ಟು ಹೊತ್ತು ಕುಳಿತಳೋ ಗೊತ್ತಿಲ್ಲ,ಸುಮಾರು ಹೊತ್ತು ಕಳೆದ ನಂತರ ಕಣ್ಣಿಗೆ ನಿದ್ದೆ ಹತ್ತಿತ್ತು.
ಮಾರನೆಯ ದಿನ ಬೆಳಿಗ್ಗೆ, ರಮಣ್ಣ ಮನೆಗೆ ಹೊರಟು ನಿಂತ, “ಹೋಗಿ ಬರುತ್ತೇನೆ ಮುಂದಿನ ವಾರ ಬರುತ್ತೇನೆ ಲಕ್ಷ್ಮಿ” ಎಂದ. “ನನ್ನ ಸರವನ್ನು ತೆಗೆದುಕೊಂಡು ಬರುವುದಾದರೆ ಬನ್ನಿ ಇಲ್ಲದಿದ್ದರೆ ಬರುವ ಅವಶ್ಯಕತೆ ಇಲ್ಲ ಎಂದಳು.” ರಮಣ ಬೇಸರದಿಂದಲೇ ಹೆಜ್ಜೆ ಹಾಕಲಾರಂಭಿಸಿದ. ಮನಸ್ಸಿನಲ್ಲಿ ಯೋಚಿಸುತ್ತಾ ನಡೆದ ನಾನು ಅಮ್ಮನ ಮಾತು ಕೇಳಬಾರದಿತ್ತು. ಅಂದು ಅಮ್ಮ “ಸ್ವಲ್ಪ ಕಡಿಮೆ ಆಗಿರುವುದಕ್ಕೆ ತೆಗೆದುಕೊಳ್ಳುವುದಲ್ಲವೇ?ಇಲ್ಲವಾದರೆ ನಿನ್ನ ಮಡದಿಯ ಚಿನ್ನ ತಗೊಳ್ತೆವಾ?ನಿನ್ನ ಹೆಂಡತಿಯ ಚಿನ್ನ ನಿನ್ನದಲ್ಲವೇನು? ಅಂದಾಗ ರಮಣ “ಅವಳಲ್ಲಿ ಒಂದು ಮಾತು ಕೇಳ್ತೇನೆ” ಎಂದ.ಅದನ್ನು ಅವಳಲ್ಲಿ ಕೇಳುವುದೇನು ಬಂತು,ನಿನ್ನವಳ ಬಂಗಾರ ತೆಗೊಳಿಕೆ ಯಾಕೆ ಪರ್ಮಿಟು?” ಎಂದು ಸಮಜಾಯಿಷಿ
ಕೊಟ್ಟಿದ್ದಳು ಅಮ್ಮ , ಅದಕ್ಕಾಗಿ ಇಂದು ಈ ಪರಿಸ್ಥಿತಿ ಬಂದಿದೆ ಎಂದುಕೊಂಡ. ಆದರೂ ಕ್ಷಮಿಸು ಎಂದು ಕೇಳಿದಾಗ ಲಕ್ಷ್ಮಿ ಒಪ್ಪಿಕೊಳ್ಳಬಹುದಾಗಿತ್ತು ಎಂದೆನ್ನು ಕೊಳ್ಳುತ್ತಾ ಮನೆಯ ದಾರಿ ನಡೆದ.
ಗಂಡ ಹೋಗಿ ಎರಡು ದಿನವಾದಾಗ ಲಕ್ಷ್ಮಿಯ ಕೋಪ ತಣ್ಣಗಾಗಿತ್ತು, ಅವಳಿಗನಿಸಿತು ಗಂಡ ಕ್ಷಮಾಪಣೆ ಕೇಳುವಾಗ ಒಪ್ಪಿಕೊಳ್ಳಬಹುದಾಗಿತ್ತು, ನಾನು ತುಂಬಾ ಕ್ರೂರವಾಗಿ ನಡೆದುಕೊಂಡೆ ಎಂದು. ಆದರೂ ಮನಸ್ಸಿನಲ್ಲಿ ದುಃಖ, ಬೇಸರ,ಕೋಪ ಎಲ್ಲಾ ಹಾಗೆ ಇತ್ತು. ನಾನು ಮನೆ ಬಿಟ್ಟು ಬರುವಾಗ ಸರವನ್ನು ಹಾಕಿಕೊಂಡು ಬರಬಹುದಿತ್ತು, ಇಲ್ಲವೇ ಅದಕ್ಕೆ ಬೀಗ ಹಾಕಿಡಬಹುದಿತ್ತು. ಇನ್ನೇನು ನಾಲ್ಕು ತಿಂಗಳಿನಲ್ಲಿ ಬರುವುದೆಂದು ಹಾಗೆ ಬಿಟ್ಟು ಬಂದೆ. ಇದುವೇ ನನ್ನ ತಪ್ಪು ಎಂದು ಮತ್ತೆ ಮತ್ತೆ ಅದನ್ನು ನೆನೆಸಿ ನೆನೆಸಿ ಅಳುತ್ತಿದ್ದಳು. ಹೀಗೆ ನಾಲ್ಕೈದು ದಿನ ಅದೇ ಗುಂಗಿನಲ್ಲಿ ಇರಬೇಕಾದರೆ ಒಂದು ದಿನ ತಂಗಿ ಲಾವಣ್ಯ ಬಂದು “ನಿನ್ನ ನಾದಿನಿ ಹಾಗೂ ಅವಳ ಗಂಡ ಬಂದಿದ್ದಾರೆ ಅಕ್ಕ” ಎಂದಳು. ಆ ಘಟನೆಯಾದ ನಂತರ ತುಂಬಾ ಆತ್ಮೀಯಳಾಗಿದ್ದ ನಾದಿನಿ ಸರೋಜನ ಮುಖ ಕೂಡ ನೋಡುವಂತಹ ಮನಸ್ಸು ಅವಳಿಗಿರಲಿಲ್ಲ. ಬೆನ್ನು ಹಾಕಿ ಮಲಗಿದವಳು ಹಾಗೆಯೇ ಇದ್ದಳು.
“ಅತ್ತಿಗೆ….” ಎಂದು ಸರೋಜ ಪ್ರೀತಿಯಿಂದ ಕರೆಯುವಾಗ ಒಲ್ಲದ ಮನಸ್ಸಿನಲ್ಲಿ ಮಗ್ಗುಲು ಬದಲಿಸಿದಳು. ಗಂಡನನ್ನು ಪರಿಚಯಿಸಿದಳು ಸರೋಜ, ಇವಳೇ ನನ್ನ ಪ್ರೀತಿಯ ಅತ್ತಿಗೆ ಎಂದಳು ಗಂಡನಲ್ಲಿ. “ಅತ್ತಿಗೆ ನೀವಿಲ್ದೆ ಮದುವೆ ಮಾಡಿಕೊಳ್ಳಲು ನನಗೆ ಮನಸೇ ಇರಲಿಲ್ಲ, ಆದರೆ ಏನು ಮಾಡುವುದು ನನ್ನ ಕೈ ಮೀರಿ ಹೋಗಿತ್ತು. ಎಲ್ಲವೂ ಅವಸರವಸವದಲ್ಲಿ ಆಯಿತು.”ಎಂದಳು . “ಅತ್ತಿಗೆ…ನಾವು ಇವತ್ತು ಬಂದಿರುವ ಮುಖ್ಯ ಕಾರ್ಯವೇ ಇದು” ಎಂದು ಸರೋಜ, ಲಕ್ಷ್ಮಿಯ ಮುತ್ತಿನ ಹಾರವನ್ನು ಅವಳ ಕೈಯಲ್ಲಿ ಇಟ್ಟಳು. “ನಿಮಗೆ ಅಮ್ಮನ ಮನೆಯಿಂದ ಕೊಟ್ಟ ಸರ ಇದು ,ನಿಮಗಿದೆಷ್ಟು ಪ್ರಿಯವಾದದ್ದು ಎಂದು ನನಗೆ ಗೊತ್ತು, ಹೆಣ್ಣು ಮಕ್ಕಳಿಗೆ ಅಮ್ಮನ ಮನೆಯ ಸಂಬಂಧ ಹಾಗೆ ಅಲ್ಲವೇ? ಅದಕ್ಕೆ ನಾನು ನನ್ನ ಗಂಡನಲ್ಲಿ ಮಾತನಾಡಿ ಇದನ್ನು ನಿಮಗೆ ಕೊಡಲೆಂದೇ ಬಂದಿದ್ದೇನೆ, ಅವರು ಕೂಡ ಒಪ್ಪಿಕೊಂಡಿದ್ದಾರೆ. ಇದನ್ನ ತೆಗೆದುಕೊಳ್ಳಿ ಅತ್ತಿಗೆ” ಎಂದಳು.
“ನೀವು ಕೊಡುವ ಪ್ರೀತಿಯೇ ನನಗೆ ಹೆಚ್ಚು, ಅದರ ಮುಂದೆ ಈ ಸರ ಏನು ಮಹಾ..? ಈ ಹಾರದ ಕಾರಣಕ್ಕೆ ನಾನು ಪ್ರೀತಿಯನ್ನು ಕಳೆದುಕೊಳ್ಳಲಾರೆ,ನೀವು ಮೊದಲಿನಂತೆ ನನ್ನನ್ನು ಪ್ರೀತಿಸುತ್ತಿರಿ” ಎಂದು ನಮಸ್ಕರಿಸಿದಳು. ಈಗ ಲಕ್ಷ್ಮಿ ಮೂಕಳಾಗಿ ಸರೋಜಾಳನ್ನು ನೋಡುತ್ತಲೇ.. ಸ್ತಬ್ದಳಾದಳು!!…..
ಬರಹ : ಭಾರತೀ ನೀರ್ಪಾಜೆ ಹೌಸ್