ಎಪ್ಪತ್ತರ ಹರೆಯದ್ಲಲೂ ಇಪ್ಪತ್ತರ ಹರೆಯದಂತೆ ಲವಲವಿಕೆಯಿಂದ ಯಕ್ಷಗಾನ ತರಗತಿ ನೀಡುತ್ತಿರುವ ಯಕ್ಷಗುರು ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ

ಯಕ್ಷಗಾನವನ್ನು ಒಂದು ಜಾನಪದ ಕಲೆ ಎಂದು ನಾವು ಕರೆಯುತ್ತಿದ್ದರೂ ಅದು ಕಾಲಾನುಗತವಾಗಿ ಜಾನಪದಕ್ಕಿಂತ ಭಿನ್ನವಾದ ವಾತಾವರಣದಲ್ಲಿ ಬೆಳೆದು ಬಂದಿದೆ ಎನ್ನುವುದು ನಿರ್ವಿವಾದ . ಯಕ್ಷಗಾನವು ಯಾವುದೇ ಒಂದು ಕಲೆಯ ಅಂಗವಲ್ಲ .ಸ್ವಯಂ ಪೂರ್ಣತೆಯನ್ನು ಪಡೆದ ಒಂದು ಸಮಷ್ಟಿ ಕಲೆ .ಯಕ್ಷಗಾನ ಕಲೆಯ ಮೂಲ ಆದಿಮಾನವನ ಕಲ್ಪನೆ,ಚಿಂತನೆಗಳ ಫಲ . ಯಕ್ಷಗಾನದಲ್ಲಿ ಸಾಹಿತ್ಯ ಸಂಗೀತ,ಅಭಿನಯ ,ಅಲಂಕಾರಗಳು ಪರಸ್ಪರ ಪೂರಕವಾಗಿ ಕ್ರಿಯಾಶೀಲವಾಗಿರುತ್ತದೆ.ಇದರಲ್ಲಿ ಸಾಹಿತ್ಯಕ್ಕೆ ಅಕ್ಷರವು ಮಾದ್ಯಮವಾಗುತ್ತದೆ.ಅಭಿನಯಕ್ಕೆ ನಟ ಮಾಧ್ಯಮನಾಗಿದ್ದಾನೆ.ಅಲಂಕಾರಕ್ಕೆ ಬೌತಿಕ ವಸ್ತುಗಳು,ಸಲಕರಣೆಗಳು ಮಾದ್ಯಮವಾಗಿರುತ್ತದೆ.ಶತಮಾನಗಳ ಇತಿಹಾಸವನ್ನು ದಾಟಿ ಬಂದರೂ ಈ ಕಲೆ ಈಗಾಗಲೇ ಸರ್ವಾಂಗೀಣವಾದ ಪ್ರಗತಿಯನ್ನುಸಾಧಿಸಿದೆ.ಯಕ್ಷಗಾನ ಕಲೆಗೆ ಒಂದು ಶಾಸ್ತ್ರೀಯ ರೂಪದ ಸ್ಪರ್ಶವು ಇದೆ.


ಇಂತಹ ಭವ್ಯ ಪರಂಪರೆ ಇರುವ ಈ ಶ್ರೀಮಂತ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಅದೆಷ್ಟೋ ಕಲಾವಿದರು ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇಂತಹ ಅದೆಷ್ಟೋ ಕಲಾವಿದರ ಪೈಕಿ ಯಕ್ಷಗಾನದ ಹಿಮ್ಮೇಳ ಮುಮ್ಮೇಳ ಸಹಿತ ಸರ್ವ ವಿಧದ ಜ್ಞಾನವನ್ನು ಹೊಂದಿ , ತನ್ನಲ್ಲಿರುವ ಈ ಜ್ಯಾನವನ್ನು ಅದೆಷ್ಟೋ ಕಲಾವಿದರಿಗೆ ಧಾರೆಯೆರೆದು ಯಕ್ಷಗಾನ ರಂಗಕ್ಕೆ ನೂತನ ಕಲಾವಿದರನ್ನು ನೀಡಿದ ಅಪ್ರತಿಮ ಸಾಧಕ ಯಕ್ಷಗುರು ಶ್ರೀರಾಮ ಸಾಲಿಯಾನ್ ಮಂಗಲ್ಪಾಡಿ
ಮಂಗಲ್ಪಾಡಿ ದಿವಂಗತ ಶಂಕರ ಮತ್ತು ಪೊಡಿಯಮ್ಮ ರವರ ಮಗನಾಗಿ ಜನಿಸಿದ ಇವರು ಬಾಲ್ಯದಲ್ಲೇ ಯಕ್ಷಗಾನದ ಬಗ್ಗೆ ಬಹಳ ಆಸಕ್ತಿ ಇತ್ತು.ತಂದೆಯವರು ಭಾಗವತರಾಗಿದ್ದು ಅವರ ಜೊತೆ ಯಕ್ಷಗಾನದ ಹವ್ಯಾಸ ಹೆಚ್ಚಾಯಿತು.ತನ್ನ 23ನೇ ವಯಸ್ಸಿನಿಂದ ನಾಟ್ಯ , ಭಾಗವತಿಕೆ ತರಗತಿಯನ್ನು ನಡೆಸಲು ಆರಂಭಿಸಿದರು.

ಮಂಗಲ್ಪಾಡಿ ಯಲ್ಲಿ ‘ಯಕ್ಷಕಾಲ ಭಾರತಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಇದರಲ್ಲಿ ಸಾವಿರಾರು ಕಲಾವಿದರಿಗೆ ತರಬೇತಿಗಳನ್ನು ನೀಡಲಾಯಿತು.ಇಲ್ಲಿ ಕಲಿತ ಅದೆಷ್ಟೋ ಕಲಾವಿದರು ಇಂದು ಕೆಲವು ಹೆಸರಾಂತ ಯಕ್ಷಗಾನ ಮೇಳಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಯಕ್ಷಗಾನ ರಂಗಕ್ಕೆ ಶ್ರೀಯುತ ರಾಮ ಸಾಲಿಯಾನ್ ಅವರ ಸೇವೆ ಸುತ್ಯಾರ್ಹವಾದದ್ದು .


ಇವರ ಬಳಿ ಕಲಿತ ಅದೆಷ್ಟೋ ಕಲಾವಿದರು ಕೆಲ ವೃತ್ತಿ ಪರ ಮೇಳಗಳಲ್ಲಿ ದುಡಿಯುತ್ತಿದ್ದು ವಿದೇಶಗಳ್ಲಲೂ ತನ್ನ ಕಲಾ ನೈಪುಣ್ಯತೆಗಳನ್ನು ಪ್ರದರ್ಶಿಸುತ್ತಿದ್ದಾರೆ.ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ತರಬೇತಿಗಳನ್ನು ನೀಡುತ್ತಿದ್ದಾರೆ. ಭಾರತೀಯ ಸಂಚಾರ ನಿಗಮದಲ್ಲಿ ಸೀನಿಯರ್ ಸೆಕ್ಷನ್ ಸೂಪರ್ ವೈಸರ್ ಆಗಿ ನಿವೃತ್ತಿ ಹೊಂದಿ ಇದೀಗ ತಮ್ಮ ವಿಶ್ರಾಂತಿ ಜೀವನದ್ಲಲೂ ಭಾಗವತಿಕೆ ಹಾಗೂ ನಾಟ್ಯ ತರಬೇತಿಗಳನ್ನು ನಡೆಸುತ್ತಿರುವ ಇವರ ಸೇವೆ ಸ್ಮರಣೀಯ . ಇವರ ಈ ಅಪ್ರತಿಮ ಸಾಧನೆಗೆ , ಕಲಾ ಸೇವೆಗೆ ಒಲಿದು ಬಂದ ಪ್ರಶಸ್ತಿ , ಗೌರವ , ಸನ್ಮಾನ ಎಣಿಕೆಗೆ ಸಿಗುವಂತದ್ದಲ್ಲ.ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಯಕ್ಷ ಸಿರಿ ಪ್ರಶಸ್ತಿ’ , ‘ಯಕ್ಷ ಕಲಾ ಸಾರಥಿ’ ,’ಯಕ್ಷ ಕಲಾ ನಿಧಿ’ ,’ಯಕ್ಷ ಮಾಣಿಕ್ಯ ‘ ಇಂತಹ ನೂರಾರು ಬಿರುದುಗಳು ಇವರನ್ನು ಹುಡುಕಿಕೊಂಡು ಬಂದಿದೆ. ವಿವಿಧ ಸಂಘಟನೆಗಳಾದ ಯಕ್ಷಪ್ರಕಾಶ , ಕರಾವಳಿಯ ಸಾಂಸ್ಕೃತಿಕ ಪ್ರತಿಷ್ಠಾನ ,ಕವಿ ಇಂಚರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇಂತಹ ನೂರಾರು ಸಂಘಟನೆಗಳ ಗೌರವ ಸನ್ಮಾನಗಳು ಪ್ರಶಸ್ತಿಗಳು ಇವರ ಮುಡಿಗೇರಿದೆ.ಕೇರಳ ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಯ ಸದಸ್ಯರು ಆಗಿದ್ದರು.


ದಿವಂಗತ ಉಪ್ಪಳ ಕೃಷ್ಣ ಮಾಸ್ಟರ್ , ದಿವಂಗತ ಕುಡಾನ ಗೋಪಾಲಕೃಷ್ಣ ಭಟ್ ,ಶ್ರೀಯುತ ರಾಮ ಸಾಲಿಯಾನ್ ರ ನಾಟ್ಯ ಗುರುಗಳು.ದಿವಂಗತ ತೆಂಕಬೈಲು ತಿರುಮಲೇಶ ಶಾಸ್ತ್ರೀ , ಮಾಂಬಾಡಿ ಸುಬ್ರಮಣ್ಯ ಭಟ್ ಇವರ ಭಾಗವತಿಕೆಯ ಗುರುಗಳು.
ಸರಕಾರಿ ಸೇವೆಯಿಂದ ನಿವೃತ್ತಿಯ ನಂತರ ವಿಶ್ರಾಂತಿ ಜೀವನದ್ಲಲೂ ಇದೀಗ ತನ್ನ ಎಪ್ಪತ್ತರ ಹರೆಯದಲ್ಲೂ ಇಪ್ಪತ್ತರ ಹರೆಯದವರಂತೆ ಲವಲವಿಕೆಯಿಂದ ಯಕ್ಷಗಾನದ ಜ್ಯಾನಾರ್ಜನೆಯನ್ನು ನೀಡುತ್ತಿರುವ ಇವರ ಸಾಧನೆ ಶ್ಲಾಘನೀಯವಾದದ್ದು .ಇವರ ಸುಪುತ್ರ ರೋಶನ್ ಬಣ್ಣದ ವೇಷದಾರಿಯಾಗಿದ್ದು ಮಹಿಷಾಸುರನಂತಹ ಪಾತ್ರದಲ್ಲಿ ಎತ್ತಿದ ಕೈ .ಪುತ್ರಿ ರಕ್ಷಿತಾ ಅಂತರ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಯಕ್ಷ ಪ್ರತಿಭೆ ಗೌರವ ಪಡೆದಿದ್ದಾರೆ.


ಈ ನನ್ನ ಎಲ್ಲ ಸಾಧನೆಗಳಿಗೆ ನನ್ನ ಧರ್ಮಪತ್ನಿ ಶ್ರೀಮತಿ ಪ್ರೇಮ ರವರ ಸಹಕಾರವೇ ಕಾರಣವಾಯಿತೆಂದು ಶ್ರೀಯುತ ರಾಮ ಸಾಲಿಯಾನ್ ರವರ ಅಭಿಪ್ರಾಯ .
ಇಂತಹ ಸುತ್ಯರ್ಹ ಸೇವೆಯನ್ನು ಸಲ್ಲಿಸುತ್ತಿರುವ ಇವರ ಯಕ್ಷಾಭಿಮಾನ ಮುಂದಿನ ತಲೆಮಾರುಗಳಿಗೆ ಮಾರ್ಗದರ್ಶನವಾಗಲಿ ಎಂಬುವುದೇ ಎಲ್ಲರ ಆಶಯ .
ಯಕ್ಷಗಾನಂ ಗೆಲ್ಗೆ

SHARE
Loading spinner

Leave a Reply

Your email address will not be published. Required fields are marked *

error: Content is protected !!