ಭಜನೆಯ ಗುರಿಕಾರ…ಕಂಬಳದ ನೇಕಾರ.. ಕೃಷಿಯ ಹರಿಕಾರ…RSS ಹಾಗೂ ಬಿಜೆಪಿ ನೇತಾರ…ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಮಾಜಿ ಅಧ್ಯಕ್ಷರು, ಪ್ರಗತಿಪರ ಕೃಷಿಕ, ಸಂಘಟನಾ ಚತುರ… ಎಲ್ಲಾ ಕ್ಷೇತ್ರಗಳ ಸಾಹುಕಾರ… ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಹುಟ್ಟಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವಸಂತ ಭಂಡಾರಿ ಕಯ್ಯ (78) ವಿಧಿವಶ .
ಸಣ್ಣ ಪ್ರಾಯದಿಂದಲೇ ಎಲ್ಲರೊಂದಿಗೆ ಬೆರೆತು ಮುಂದೆ ಬಾಕ್ರಬೈಲಿನಲ್ಲಿ ಎಲ್ಲರನ್ನೂ ಸಂಘಟಿಸುವ ಜೊತೆಗೆ ಪ್ರಗತಿಪರ ಕೃಷಿಕರಾಗಿ ಹಾಗೂ ಕಂಬಳ ಕೋಣದ ಮಾಲಕರು ಮತ್ತು ಓಟಗಾರ, ಕೂಡ ಪ್ರಸಿದ್ದಿಯನ್ನು ಪಡೆದ ಪ್ರಗತಿಪರ ಕೃಷಿಕ, ಬಿಜೆಪಿ ಮುಖಂಡ ವಸಂತ ಭಂಡಾರಿ ಕಯ್ಯ (78) ಅವರು ವಿಧಿವಶರಾಗಿದ್ದಾರೆ. ಈ ಅವಧಿಯಲ್ಲಿ ಭಜನೆ, ಸೇವಾ ಕಾರ್ಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಅದೂ ಅಲ್ಲದೆ ಬಾಕ್ರಬೈಲಿನಲ್ಲಿ ಸಂಘ ಚಟುವಟಿಕೆಗಳನ್ನು ಸಕ್ರಿಯಗೊಳಿಸಿ, ಯುವಕರನ್ನು ಸಂಘ ಹಾಗೂ ಪಕ್ಷದೆಡೆಗೆ ಸೆಳೆದು ಕಾರ್ಯಚಟುವಟಿಕೆಗಳಿಗೆ ಬುನಾದಿ ಹಾಕಿದ್ದರು. ಬಾಕ್ರಬೈಲು ಸುತ್ತಮುತ್ತಲೂ ನಡೆಯುತ್ತಿದ್ದ ಧಾರ್ಮಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದರು. ಬಾಕ್ರಬೈಲಿನಲ್ಲಿ ಶ್ರೀ ಸೂರ್ಯೇಶ್ವರ ಕಲಾವೃಂದ ಎನ್ನುವ ಸಂಘಟನೆಯನ್ನು 55 ವರ್ಷಗಳ ಹಿಂದೆ ಸ್ನೇಹಿತರ ಜೊತೆ ಹುಟ್ಟುಹಾಕಿ ಸ್ಥಾಪಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಜೊತೆಗೆ ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿದರು. ಅದೂ ಅಲ್ಲದೆ ಬಾಕ್ರಬೈಲು ಭಾಗದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಈ ಭಾಗದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಕಲಾವೃಂದದ ಮೂಲಕ ಸಹಕಾರ ನೀಡುತ್ತಿದ್ದರು. ನಾಯಕತ್ವದ ಗುಣದಿಂದ ಬಾಕ್ರಬೈಲು ಹಾಗೂ ವರ್ಕಾಡಿ ಭಾಗದಲ್ಲಿ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯಲ್ಲಿ ಸಕ್ರಿಯರಾಗಿ ಸಂಘಟನೆಯ ಕಾರ್ಯ ಚಟುವಟಿಕೆಗಳಿಗೆ ವೇಗ ನೀಡಿದರು. ಯುವಕರನ್ನು ಒಟ್ಟುಗೂಡಿಸಿ ಕಲೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಇವರು ಓರ್ವ ಪ್ರಗತಿಪರ ಕೃಷಿಕ ಕೂಡ ಆಗಿದ್ದು, ಕೃಷಿಗೆ ಸಂಬಂಧಿಸದ ಸಮಸ್ಯೆಗಳಾದಾಗ ಪ್ರತಿಭಟನೆ ಮಾಡಿ, ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಕೂಡ ಮಾಡಿದ್ದರು. ಅಲ್ಲದೆ ಯಶಸ್ವಿ ಕೃಷಿಕರಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಸ್ವತಹ ಕಂಬಳ ಕೋಣದ ಮಾಲಕರಾಗಿದ್ದ ಇವರು, ಓಟಗಾರನಾಗಿ ಕೂಡ ಭಾಗವಹಿಸಿ ಹತ್ತು ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿ ಎಲ್ಲರಿಗೂ ಸ್ಪೂರ್ತಿಯಾಗಿದ್ದರು. ಬಾಕ್ರಬೈಲು ಭಾಗದಲ್ಲೂ ನಡೆಯುವ ಕಾರ್ಯಕ್ರಮದಲ್ಲಿ ಮುಂದಾಳತ್ವ ವಹಿಸಿಕೊಂಡು, ಯಶಸ್ವಿಯಾಗಿ ಮುನ್ನಡೆಸುತ್ತಿದ್ದರು. ಯುವಕರನ್ನು ಸಕರಾತ್ಮಕ ಹಾದಿಯಲ್ಲಿ ಮುನ್ನಡೆಸುವಲ್ಲಿ ಕೂಡ ಇವರು ಮುಂದಾಳತ್ವ ವಹಿಸಿದ್ದರು. ಇನ್ನು ತಮ್ಮ ಇಳಿವಯಸ್ಸಿನಲ್ಲೂ ಕಲೆ ಸಂಸ್ಕೃತಿ ಮತ್ತು ಕೃಷಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಭಂಡಾರಿಯವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕಿರಿಯರಿಗೆ ಪ್ರೋತ್ಸಾಹ ನೀಡುತ್ತಿದ್ದರು.
1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಭಂಡಾರಿ ಅವರು ಜನಿಸಿರುವುದು ವಿಶೇಷ. ಇನ್ನು ತುರ್ತು ಪರಿಸ್ಥಿತಿಯ ಸಂದರ್ಭ ಇಡೀ ದೇಶವೇ ಸಂಕಷ್ಟ ಪಡುತ್ತಿದ್ದ ಸಂದರ್ಭದಲ್ಲಿ ಬಾಕ್ರಬೈಲು ಸೇರಿದಂತೆ ಪರಿಸರದ ಹಲವು ಭಾಗಗಳಲ್ಲಿ ಕೂಡ ಜನತೆ ಸಮಸ್ಯೆ ಎದುರಿಸಿತ್ತು. ಆದರೆ ಭಂಡಾರಿ ಅವರು ಹತ್ತು ಹಲವು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವ ಮೂಲಕ ಜನರ ಪಾಲಿಗೆ ಆಶಾಕಿರಣವಾಗಿದ್ದರು. ಅಲ್ಲದೆ ಬಾಕ್ರಬೈಲು ಭಾಗದಲ್ಲಿ ಆರ್ ಎಸ್ ಎಸ್ ಹಾಗೂ ಬಿಜೆಪಿ ಸಂಘಟನೆಯಲ್ಲಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾಗಿ ಗುರುತಿಸಿದ್ದರು.
ಭಜನೆ ಸಂಘಟನೆ
ಕೇವಲ ಪಕ್ಷ ಸಂಘಟನೆ ಮಾತ್ರವಲ್ಲದೆ ಸಾಂಸ್ಕೃತಿಕ ಕಾರ್ಯದಲ್ಲೂ ಭಂಡಾರಿ ಅವರು ಯಶಸ್ವಿಯಾಗಿ ತೊಡಗಿಕೊಂಡವರಾಗಿದ್ದಾರೆ. ಅದರಲ್ಳೂ ಭಜನೆ ಸಂಘಟಿಸುವ ಮೂಲಕ ಪರಿಸರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಅದ್ಬುತ ಕಂಠವನ್ನು ಹೊಂದಿದ್ದ ಭಂಡಾರಿ ಅವರು ಬಾಲ್ಯದಿಂದಲೇ ಭಜನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಸಂಖ್ಯಾತ ಭಜನಾ ಕಾರ್ಯಕ್ರಮಗಳಲ್ಲಿ ಯುವಕರನ್ನು ಮುನ್ನಡೆಸಿದ್ದರು. ಮಕ್ಕಳು, ಯುವಕರನ್ನು ಭಜನೆಯತ್ತ ಸೆಳೆದು ಧಾರ್ಮಿಕ ಹಾಗೂ ಸಂಘಟನಾ ಕಾರ್ಯದಲ್ಲಿ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡಿದ್ದರು. ಕೆಲವು ಕಡೆ ಒಂದೇ ದಿನ ಮೂರು ನಾಲ್ಕು ಕಡೆಗಳಲ್ಲಿ ಭಜನೆ ಕಾರ್ಯಕ್ರಮವಿದ್ದರೂ ಎಲ್ಲಾ ಕಾರ್ಯದಲ್ಲೂ ಭಾಗವಹಿಸಿದ್ದು, ಭಜನೆ ಬಗ್ಗೆ ಅವರಿಗೆ ಇರುವ ಅಭಿಮಾನವನ್ನು ತೋರಿಸುತ್ತದೆ. ಆದರೆ ಕಳೆದ ಒಂದು ವರ್ಷದಿಂದೀಚಿಗೆ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಕೂಡ ಭಂಡಾರಿ ಅವರು ಇತ್ತೀಚಿಗಿನ ಐದು ತಿಂಗಳಲ್ಲೂ ಭಜನಾ ಕಾರ್ಯದಲ್ಲೂ ಯಶಸ್ವಿಯಾಗಿ ಸಂಘಟನೆ ಶಕ್ತಿಯಾಗಿ ಕೆಲಸ ಮಾಡಿದ್ದರು.
ಸಂಘಟನಾ ಚತುರ
ಸಮಾಜವನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಆದರೆ ಭಂಡಾರಿ ಅವರು ಮಾತ್ರ ಇದಕ್ಕೆ ತದ್ವಿರುದ್ದ. ಪಕ್ಷ ಸಂಘಟನೆಯಲ್ಲದೆ, ಸಾಮಾಜಿಕ ಸಂಘಟನೆಯಲ್ಲೂ ಇವರು ಯುವಕರನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಚಾತುರ್ಯ ಹೊಂದಿದ್ದರು. ಅಲ್ಲದೆ ಯುವಕರು ಕೂಡ ಇವರು ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದದ್ದು ಭಂಡಾರಿ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ. ಕೇವಲ ಸಾಂಸ್ಕೃತಿಕ, ಧಾರ್ಮಿಕ, ಪಕ್ಷ ಸಂಘಟನೆಯಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಭಂಡಾರಿ ಅವರು ಛಾಪು ಮೂಡಿಸಿದ್ದರು. ಅದರಲ್ಲೂ ಉತ್ತಮ ಕಬಡ್ಡಿ ಪಟುವಾಗಿ ಸ್ಥಳೀಯ ಯುವಕರನ್ನು ಸಂಘಟಿಸಿದ್ದರು.
ವಸಂತ ಭಂಡಾರಿ ಕಯ್ಯ ಅವರು ಸಂಘದ ನಿಷ್ಠಾ ಸೇವಕನಾಗಿ ಶಿಸ್ತಿನ ಸಿಪಾಯಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಅಹರ್ನಿಶಿಯಾಗಿ ದುಡಿದು ಮಾದರಿ ವ್ಯಕ್ತಿತ್ವದ ಮೂಲಕ ಸರ್ವರ ಪ್ರೀತಿಗೆ ಪಾತ್ರರಾದವರು. ನಿಮ್ಮನ್ನು ಕಳೆದುಕೊಂಡ ನಮಗೆ ತುಂಬಲಾರದ ನಷ್ಟ, ನಿಮ್ಮ ಆತ್ಮಕ್ಕೆ ಸದ್ಗತಿ ದೊರಕಲೆಂದು ಭಗವಂತನಲ್ಲಿ ನಮ್ಮ ಪ್ರಾರ್ಥನೆ