ಕುಲವನ್ ಐತಿಹ್ಯ

ಉತ್ತರ ಕೇರಳ ಭಾಗವು ಕಲೆ, ಸಂಸ್ಕೃತಿ, ಧಾರ್ಮಿಕ ಆಚಾರ ವಿಚಾರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುವ ತಾಣವಾಗಿದೆ . ತಲತಲಾಂತರದ ಕಾಲದ ಹಿಂದಿನಿಂದಲೂ ಇಲ್ಲಿ ಆಚಾರಗಳು ಶ್ರೀಮಂತವಾಗಿತ್ತು , ಸಂಪ್ರದಾಯಗಳು ಹಾಸುಹೊಕ್ಕಾಗಿತ್ತು , ಧಾರ್ಮಿಕತೆಯ ಸಾರವು ಅಗಾಧವಾಗಿ ಬೇರೂರಿತ್ತು . ಮಲಬಾರ್ ಭಾಗ ಎಂದ ಕೂಡಲೇ ತಟ್ಟನೆ ನೆನಪಿಗೆ ಬರುವುದು ದೈವಾರಾಧನೆ . ಕರಾವಳಿಯದಾದಂತ್ಯ ಗುಡಿ , ದೈವಸ್ಥಾನ , ಕುಲಂ , ಕಳಗಂ , ಕಾವು ಈ ರೀತಿಯ ನಾನಾ ಕಡೆಗಳಲ್ಲಿ ದೈವಗಳು ತನ್ನ ಪ್ರಭಾವನನ್ನು ಬೀರುತ್ತಿದೆ . ಅವುಗಳನ್ನು ಸಂತೈಸಲು ಕಲಿಯಾಟ, ದೈವ ಕೆಟ್ಟು, ಒತ್ತೆಕೋಲ, ಪೆರುಂ ಕಳಿಯಾಟ, ಕಲಶ ಮಹೋತ್ಸವ ಹೀಗೆ ನಾನಾ ಪ್ರಕಾರದಲ್ಲಿ ಅವುಗಳನ್ನು ಸಂತೈಸುವ ಸಾಂಪ್ರದಾಯ ನಮ್ಮ ನಾಡಲ್ಲಿ ಇದೆ.

ವಯನಾಟು ಕುಲವನ್ ಅಥವಾ ಆದಿದಿವ್ಯನ್ ಶಿವನ ಅಂಶದಿಂದ ಜನಿಸಿದ ದಿವ್ಯ ಮೂರುತಿ. ಅವನ ಜನ್ಮದ ಜಾಲವು ಶಿವ ಪಾರ್ವತಿಯರೊಂದಿಗೆ ಬಂಧವನ್ನು ಬೆಸೆಯುವಂತದ್ದು. ಒಮ್ಮೆ ಶಿವ ಮತ್ತು ಪಾರ್ವತಿ ಬೇಡರಂತೆ ವೇಷ ಧರಿಸಿ ಕಾಡಿನಲ್ಲಿ ಬೇಟೆಯಲ್ಲಿ ತೊಡಗಿಸಿಕೊಂಡ ಕ್ಷಣ . ಶಿವ ಮತ್ತು ಪಾರ್ವತಿಯಿಬ್ಬರ ವಿನೋದದ ದಿನಗಳನ್ನು ಕಳೆಯುತ್ತಿದ್ದರು. ಕಾಡಿನಲ್ಲಿ ಬೇಟೆಯಾಡುತ್ತಾ ಜೊತೆಯಾಗಿಯೇ ಸಮಯ ಕಳೆಯುತ್ತಿದ್ದರು. ಒಮ್ಮೆ ಬೇಟೆಯ ಸಮಯದಲ್ಲಿ, ಶಿವನು ಪಾರ್ವತಿಯತ್ತ ದೈಹಿಕವಾಗಿ ಆಕರ್ಷಿತನಾಗಿ ಮೋಹಿಸುವಂತೆ ಕೇಳಿಕೊಂಡನು. ಆದರೆ ಪಾರ್ವತಿ ದೇವಿ ನಿರಾಕರಿಸಿದಳು. ಶಿವನ ನಿಯಂತ್ರಣ ತಪ್ಪಿತು ಮತ್ತು ಅವನ ದೇಹದ ದ್ರವವು ನೆಲಕ್ಕೆ ಚಿಮಲ್ಪಟ್ಟಿತು. ಆ ಹನಿಗಳಿಂದ ‘ತೆನ್ಮಕಲ್’, ‘ಕರಿಮಕಲ್’ ಮತ್ತು ‘ತಿರುಮಕಲ್’ ಎಂಬೀ ಮೂರು ವೃಕ್ಷಗಳು ಬೆಳೆದವು.
ಈ ಮೂರು ವೃಕ್ಷಗಳಲ್ಲಿ, ತೆನ್ಮಕಲ್ ಅಂದರೆ ತೆಂಗಿನ ಮರದ ತುದಿಯಿಂದ ಮದ್ಯ ಅಥವಾ ಮಧು ಬರಲು ಶುರುವಾಯಿತು . ಶಿವನು ಮಧುವನ್ನು ಕುಡಿದು ಮತ್ತ ವಿಲಾಸವನ್ನು ಆಡಿದನು. ಅತಿಯಾದ ವಿನೋದದಿಂದ ಶಿವನು ಪಾರ್ವತಿಯನ್ನೇ ಸಂಪೂರ್ಣವಾಗಿ ಮರೆತು ಹೋಗಿದ್ದ . ಮದ್ಯ ವಿನೋದದಿಂದ “ಶಿವ ತಾಂಡವ”ದಲ್ಲಿ ತೊಡಗಿದ್ದನ್ನು. ಇತ್ತ ತನ್ನ ಪತಿಯ ಅವಸ್ಥೆ ಕಂಡ ಪಾರ್ವತಿ ದೇವಿಯು ಗಂಡನ ಬಗ್ಗೆ ಚಿಂತಿಸಿ ದಿನ ನಿತ್ಯವೂ ಕೊರಗುತ್ತಿದ್ದಳು. ಒಮ್ಮೆ ಪಾರ್ವತಿ ದೇವಿಯು ಉಪಾಯದಿಂದ ಕಲ್ಪ ವೃಕ್ಷದಿಂದ ಬರುತಿದ್ದ ಮಧುವನ್ನು ತಡೆದಳು.ಶಿವನು ಮಧುವನು ಕುಡಿಯಲು ಮರುದಿನ ಮರದ ಬಳಿ ಹೋದಾಗ, ಮಧು ಬರದ ಕಲ್ಪ ವೃಕ್ಷವನ್ನು ನೋಡಿ ಆತ ಸಂಪೂರ್ಣವಾಗಿ ನಿರಾಶೆಗೊಂಡನು. ಮತ್ತು ತನ್ನ ತಾಳ್ಮೆಯನ್ನು ಕಳೆದುಕೊಂಡನು. ಮಧು ಸಿಗದಿದ್ದಾಗ ಅತ್ಯಾಕ್ರೊಶದಿಂದ ಸಿಡಿದೆದ್ದ ಶಿವನು ತನ್ನ ತೊಡೆಗಳನ್ನು ತನ್ನ ಜಡೆಯಿಂದ ಹೊಡೆದುಕೊಂಡನು. ಇದರ ಪರಿಣಾಮ ಆದಿದಿವ್ಯನ್ ಅಥವಾ ಆದಿತೆಯ್ಯನ್ ಎಂಬ ಶಕ್ತಿಯ ಜನನ ಭೂಲೋಕದಲ್ಲಾಯಿತು. ಶಿವನು ತನ್ನ ತೊಡೆಯಿಂದ ಹುಟ್ಟಿದ ಮಗನಿಗೆ ತೆನ್ಮಕಲ್ ಮರದಿಂದ ಮಧುವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಕೊಟ್ಟನು. ಆದಿದಿವ್ಯನು ತನ್ನ ತಂದೆಯ ನಿರ್ದೇಶಗಳನ್ನು ಪಾಲಿಸಿಕೊಂಡೇ ಬರುತ್ತಿದ್ದನು . ಆದಿದಿವ್ಯನು ತರುತ್ತಿದ್ದ ಮಧುವನ್ನು ಕುಡಿದು ಶಿವ ದಿನವೂ ಪಾನಮತ್ತ ನಾಗಿರುತ್ತಿದ್ದನು.
ಪಾರ್ವತಿ ಮಾತೆಗೆ ತನ್ನ ಪತಿ ಪ್ರತಿದಿನ ಮದ್ಯಪಾನ ಮಾಡುವುದನ್ನು ಸಹಿಸುತ್ತಿರಲಿಲ್ಲ. ಹೀಗಾಗಿ ಭಗವಾನ್ ವಿಷ್ಣುವಿನ ಸಹಾಯದಿಂದ ಪಾರ್ವತಿಯು ಶಿವನ ಕೋಪಕ್ಕೆ ಆದಿವ್ಯನ್ ನನ್ನು ಒಳಗಾಗಿಸಿ ದೇವಲೋಕದಿಂದ ಗಡಿಪಾರು ಮಾಡಿಸಿದಳು. ಕೈಲಾಸದಿಂದ ಓಡಿಸಿದ ದಿವ್ಯನ್ ಭೂಮಿಯಲ್ಲಿ “ವಾಯನಾಟ್ಟು ಕುಲವನ್” ಆಗಿ ಅವತರಿಸಿದನು.


ಕುಲವನ್ ಎಂದರೆ ಕುಟುಂಬದ ಮುಖ್ಯಸ್ಥ ಅಥವಾ ಹಿರಿಯ ಎಂದರ್ಥವಿದೆ. ಈ ದೈವವನ್ನು ತೊಂಡಚ್ಚನ್ ದೈವವೆಂದು ಕರೆಯುತ್ತಾರೆ. ತೊಂಡೆಚ್ಚನೆಂದರೆ ಹಿರಿಯ ಇಲ್ಲವೇ ಅಜ್ಜ ಎನ್ನುವ ಅರ್ಥವಿದೆ. ಶಿವನ ಪರಮ ಭಕ್ತೆಯಾಗಿದ್ದ ನೀಲಿಮಾದತಿಂಗಲ್ ತಮ್ಮರಸ್ಸೇರಿಯಮ್ಮನಿಗೆ ಪುತ್ರ ಭಾಗ್ಯ ಕಲ್ಪಿಸಬೇಕೆಂದು ದಿನವೂ ಶಿವನಲ್ಲಿ ಬೇಡಿಕೊಳ್ಳುತ್ತಿದ್ದಳು . ನಾನಾ ಉಪವಾಸ ವೃತಗಳನ್ನು ಹಿಡಿಯುತ್ತಿದ್ದಳು. ಹೀಗಿರುವ ಶಿವಭಕ್ತೆಗೆ ಕುಲವನ್ ಜನಿಸಿದನು. ಕುಲವನ್ ಶಿವನ ಮಗನಾಗಿದ್ದ ಕಾರಣ. ಶಿವನ ಅಂಶವು ಅವನಲ್ಲಿ ಪ್ರಜ್ವಲಿಸುತ್ತಿತ್ತು . ಕುಲವನ್ ತನ್ನ ಹೆಚ್ಚಿನ ಸಮಯವನ್ನು ಬೇಟೆಯಲ್ಲಿ , ಮಧು ಪಾನದಲ್ಲಿ ಕಳೆಯುತ್ತಿದ್ದನು .ಒಮ್ಮೆ ಮದ್ಯವು ಸಿಗದ ಸಮಯದಲ್ಲಿ, ಕುಲವನ್ ತನ್ನ ತಂದೆ ಶಿವನಿಗಾಗಿ “ಕದಳಿವನ” ದಲ್ಲಿ ಸಂರಕ್ಷಿಸಲ್ಪಟ್ಟಿದ್ದ ಅಷ್ಟ ಮಧುಕಲಶದ ಮಧುವನ್ನು ಕುಡಿಯಲು ನಿರ್ಧರಿಸಿದನು.

ಅಷ್ಟ ಮಧುಕಲಶಂದಿಂದ ಒಂದು ಕಲಶ ಗಿಂಡಿಯ ಮದ್ಯ ಕುಡಿಯಲು ಪ್ರಯತ್ನಿಸಿದಾಗ ಕದಳಿವನದ ಮಧುಪಾನ ಮಾಡಬೇಡ ಎನ್ನುವ ಅಶರೀರ ವಾಣಿಯೊಂದು ಕೇಳಿಸಿತು. ಅದನ್ನು ಕೇಳಿಸದ ಮದು ಪಾನವನ್ನು ಮಾಡಿಯೇ ಬಿಟ್ಟ. ಶಿವನು ರುದ್ರನಾಗಿ ಅವನ ಮುಂದೆ ಕಾಣಿಸಿಕೊಂಡನು. ತನ್ನ ಮಗನಿಗೆ ಜೀವಮಾನವಿಡೀ ಕುರುಡನಾಗಿ ಬಾಳೆಂದು ಶಪಿಸಿದನು. ಕ್ಷಣಮಾತ್ರದಲ್ಲಿ ಕುಲವನು ತನ್ನ ದೃಷ್ಟಿಯನ್ನು ಕಳೆದುಕೊಂಡನು. ತನ್ನ ಪಶ್ಚಾತಾಪದ ಅರಿವು ಆದಿವ್ಯನ್ ಗೆ ಆಯಿತು. ಹಾಗೆ ತಂದೆಯಲ್ಲಿ ಪರಿಹಾರವನ್ನು ಪರಿ ಪರಿಯಾಗಿ ಕೇಳಿಕೊಂಡನು. ಶಿವನಿಗೆ ತನ್ನ ಮಗನ ಬಗ್ಗೆ ಕನಿಕರ ಹುಟ್ಟಿತು. ಮತ್ತು ಆತನಿಗೆ ಎರಡು ಬೆಳ್ಳಿಯ ಕಣ್ಣುಗಳನ್ನು ನೀಡಿದನು. ಅವುಗಳನ್ನು ಧರಿಸಿದ ನಂತರವೂ, ಕುಲವನ್ ಏನನ್ನೂ ನೋಡಲು ಸಾದ್ಯವಾಗಲಿಲ್ಲ . ತನ್ನ ದೃಷ್ಟಿಯನ್ನು ಮರಳಿ ಪಡೆಯಲು ಬೇರೆದಾರಿಯ ಕಾಣಿಸುವಂತೆ ತಂದೆಯಲ್ಲಿ ಬೇಡಿಕೊಂಡನು. ಶಿವನು ಅವನಿಗೆ ಒಂದು ಬಿದಿರಿನ ಸೂಟೆಯನ್ನು, ಬಿದಿರಿನ ಬಿಲ್ಲು ಬಾಣವನ್ನು , ನೀಡುತ್ತಾನೆ ಮತ್ತು ಆ ಸೂಟೆಯ ಬೆಳಕಿನ ಸಹಾಯದಿಂದ ಜಗತ್ತನ್ನು ನೋಡುವಂತೆ ಹೇಳಿದನು. ತನ್ನ ತಂದೆಯ ಕಾಣಿಕೆಗಳೊಂದಿಗೆ, ಕುಲವನ್ ತನ್ನ ಯಾತ್ರೆಯನ್ನು ಬೆಟ್ಟ ಪರ್ವತಗಳನ್ನು ದಾಟುತ್ತ ಪ್ರಾರಂಭಿಸಿದನು. ಅನೇಕ ತೊಂದರೆಗಳನ್ನು ಎದುರಿಸಿದನು. ದೃಷ್ಟಿ ಬರದ ಕೋಪದಿಂದ ಕುಲವನ್ ಬೆಳ್ಳಿಯ ಕಣ್ಣುಗಳು ಮತ್ತು ಬೆಳಕಿನ ಸೂಟೆಯನ್ನು “ವಡಕ್ಕುಮನ್ನೀರ್ ಮಹಾಪರ್ವತದತ್ತ” ಎಸೆದನು. ಕಣ್ಣುಗಳು ಶಿವನ ‘ಹೋಮಕುಂಡಂ’ದಲ್ಲೂ ಮತ್ತು ಉರಿಯುತ್ತಿದ್ದ ಬಿದಿರಿನ ಸೂಟೆ “ಅಧಿಪರಂಬನ್ ಕಣ್ಣನ್” ಅಂಗಳದಲ್ಲಿ ಬೀಳುತ್ತೆ.

ದಿವ್ಯಶಕ್ತಿಯನ್ನು ಕುಲವನ್ ಆ ಕ್ಷಣದಿಂದ ಪಡೆದನು. ಅಂದಿನಿಂದ “ವಯನಾಟ್ಟು ಕುಲವನ್” ವಿಶೇಷವಾಗಿ ಹಿಂದೂ “ಥಿಯಾ” ಸಮುದಾಯಕ್ಕೆ ಸೇರಿದವರು ದೇವರಂತೆ ಪೂಜಿಸ ತೊಡಗಿದರು. ವಯನಾಡಿನಲ್ಲಿ ಈತ ದಿವ್ಯ ಶಕ್ತಿಯನ್ನು ಪಡೆದ ಕಾರಣ ವಾಯನಾಟು ಕುಲವನ್ ಎಂಬ ಹೆಸರು ಪ್ರಾಪ್ತಿಆಗುತ್ತದೆ. ವಯನಾಟು ಕುಲವನ್ ದೈವಕಟ್ಟು ಸಂದರ್ಭದಲ್ಲಿ ಈ ದೈವವನ್ನು ಕಟ್ಟಿ ಆಡಿಸುವ ಪರಿಪಾಠವಿದೆ. ಇತರೆ ದೈವಗಳಿಗಿಂತಲೂ ವಿಶಿಷ್ಟವಾದ ರೂಪ ಈ ದೈವಕ್ಕಿದೆ.

✍🏻✍🏻ಗಿರೀಶ್ ಪಿಎಂ ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!