ಕಾಸರಗೋಡಿನ ಶಾಸನಗಳು

ಕೇರಳ ರಾಜ್ಯದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಶಾಸನಗಳು ಕಂಡುಬರುವ ಜಿಲ್ಲೆಯೆಂದರೆ ಅದು ಕಾಸರಗೋಡು. ಪ್ರಾಚೀನ ಕಾಲದಲ್ಲಿ ತುಳುನಾಡಿನ ನಾಡಿ ಮಿಡಿತವಾಗಿದ್ದ ಕಾಸರಗೋಡಿನಲ್ಲಿ 20 ಶಾಸನಗಳನ್ನು ಪ್ರಸ್ತುತ ನೋಡಬಹುದು. ಅದರಲ್ಲೂ ಚಂದ್ರಗಿರಿ ನದಿಯ ಉತ್ತರದಲ್ಲಿ ಈ ಶಾಸನಗಳ ಸಂಖ್ಯೆಯು ಅತಿ ಹೆಚ್ಚಾಗಿ ಕಾಣಸಿಗುತ್ತದೆ. ಕಾಸರಗೋಡಿನ ಭಾಗದಲ್ಲಿ ಕಾಣಸಿಗುವಂತಹ ಶಾಸನಗಳಲ್ಲಿ 90% ಕ್ಕೂ ಹೆಚ್ಚಿನ ಶಾಸನಗಳು ದಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ದಾನಶಾಸನವಾಗಿದೆ. ಇದರಲ್ಲಿ ಭೂದಾನಕ್ಕೆ ಸಂಬಂಧಿಸಿದ ಮಾಹಿತಿಗಳು ಹೆಚ್ಚಾಗಿ ಅಡಕವಾಗಿದೆ.


ಕಾಸರಗೋಡು ಈ ಭಾಗದಲ್ಲಿ ಮೂಲ ಚರಿತ್ರೆಗಳು ಪ್ರವಾಸಿಗರ ದಾಖಲೆಗಳಲ್ಲಿ ಲಿಖಿತವಾಗಿ ದಾಖಲಾಗಿದ್ದರು ಸಹ ಅದಕ್ಕೆ ಇನ್ನಷ್ಟು ಪುಷ್ಟಿಯನ್ನು ಈ ಶಾಸನಗಳು ನೀಡುತ್ತದೆ ಎಂದರೆ ತಪ್ಪಾಗಲಾರದು. ವಿದೇಶಿ ದಾಖಲೆಗಳಲ್ಲಿ ದಾಖಲಾಗದ ಮಾಹಿತಿಗಳು ಶಾಸನಗಳಲ್ಲಿ ದಾಖಲಾಗಿದ್ದು ಇವುಗಳ ವ್ಯಾಪ್ತಿಯನ್ನು ಹೆಚ್ಚಿಸಿದೆ. ವಿದೇಶಿ ಪ್ರವಾಸಿಗರು ಈ ನಾಡಿನ ದಾಖಲೆಗಳನ್ನು ಉಲ್ಲೇಖಿಸುವ ಮೊದಲೇ ಈ ಭಾಗದಲ್ಲಿ ಶಾಸನಗಳ ಪರಂಪರೆಯು ಶುರುವಾದ್ದುದರಿಂದ ಕಾಸರಗೋಡಿನ ವಿದೇಶಿ ದಾಖಲೆ ಪೂರ್ವ ಇತಿಹಾಸವನ್ನು ತಿಳಿಯಲು ಸಹಕಾರಿಯಾಗುತ್ತದೆ. ಇದು ಚರಿತ್ರೆಯನ್ನು ತಿಳಿಸುವ ಪ್ರಾಥಮಿಕ ಆಕಾರವೇ ಆಗಿದೆ.
ಉತ್ತರ ಕಾಸರಗೋಡಿನಲ್ಲಿ ಶಾಸನಗಳನ್ನು ಹೊರಡಿಸಿದ ಕೀರ್ತಿ ಮೊದಲಿಗೆ ಅಲುಪ ಅರಸರಿಗೆ ಸಲ್ಲುತ್ತದೆ. ಅಳುಪ ಅರಸರು ತುಳುನಾಡನ್ನು ಬಹುಕಾಲ ಆಳಿದ ದೊರೆಗಳಾಗಿದ್ದಾರೆ. ಇವರು 10ನೇ ಶತಮಾನದ ಕೊನೆಯಲ್ಲಿ ಈ ಭಾಗದಲ್ಲಿ ಶಾಸನಗಳನ್ನು ಹೊರಡಿಸಿದ್ದಾರೆ. ತಳಂಗರೆಯ ಜಯಸಿಂಹನ ಶಾಸನವು ಕಾಸರಗೋಡಿನ ಅತ್ಯಂತ ಪ್ರಾಚೀನವಾದ ಶಾಸನವಾಗಿದೆ. ಈ ಶಾಸನವೂ ಕನ್ನಡ ಲಿಪಿಯಲ್ಲಿದೆ. ಜಯಸಿಂಹನ ಕುರಿತಾದ ಮಾಹಿತಿಯನ್ನು ಇದು ನೀಡುತ್ತದೆ.
ಇದಲ್ಲದೆ ಅಳುಪರಿಗೆ ಸಂಬಂಧಿಸಿದ ಇತರ ಶಾಸನಗಳೆಂದರೆ , ಕಿದೂರು ಶಾಸನ, ಗೋಸಡ ಶಾಸನ, ಅನಂತಪುರ ಶಾಸನ, ಹೇರೂರು ಶಾಸನ, ಕೊಡ್ಯಮ್ಮೆ ಶಾಸನ. ಈ ಶಾಸನಗಳೆಲ್ಲವೂ 12-13ನೇ ಶತಮಾನದ ಆಸುಪಾಸಿಗೆ ಸೇರಿದ್ದಾಗಿದೆ. ಕಾಸರಗೋಡಿನಲ್ಲಿ ಇಂದಿಗೆ ಕಾಣುವ ಪ್ರಮುಖ ಪ್ರಾಚೀನ ದೇವಾಲಯಗಳನ್ನು ಇವರ ಕಾಲದಲ್ಲಿ ನಿರ್ಮಿಸಲಾಯಿತು ಎಂಬುದಾಗಿ ಇತಿಹಾಸಕಾರರ ಅಭಿಪ್ರಾಯವಾಗಿದೆ.

ಕಾಸರಗೋಡಿನ ಉತ್ತರ ಭಾಗವನ್ನು ಅಳುಪ ಅರಸರು ಆಡಳಿತ ಮಾಡುತ್ತಿದ್ದರೆ ಇತ್ತ ಕಾಸರಗೋಡಿನ ದಕ್ಷಿಣ ಭಾಗವನ್ನು ಚಂದ್ರಗಿರಿ ನದಿಯನ್ನು ಗಡಿಯನ್ನಾಗಿ ಮಾಡಿಕೊಂಡು ಪೆರುಮಾಳ್ ಅರಸರು ಆಳ್ವಿಕೆಯನ್ನು ನಡೆಸುತ್ತಿದ್ದರು. ಪೆರುಮಾಳ್ ರಾಜ ಎರಡನೇ ಭಾಸ್ಕರ ವರ್ಮನ ಕಾಲದಲ್ಲಿ ದಕ್ಷಿಣ ಭಾಗದಲ್ಲಿನ ದೇವಾಲಯಗಳು ಜೀರ್ಣೋದ್ಧಾರವಾಯಿತು. ಈ ಬಗ್ಗೆ 11ನೇ ಶತಮಾನದ ಆದಿ ಭಾಗಕ್ಕೆ ಸೇರಿದ ‘ ಪುಲ್ಲೂರು ಕೊಡವಲಂ’ ಶಾಸನವು ಮಾಹಿತಿಯನ್ನು ನೀಡುತ್ತದೆ. ಹೀಗೆ 11ನೇ ಶತಮಾನದಿಂದ ಇತ್ತ ಕೆಳದಿ ಅರಸರು ಬರುವತನಕ ದಕ್ಷಿಣ ಕಾಸರಗೋಡು ಭಾಗವು ಮಲಯಾಳಿ ಅರಸರ ಕೈಯಲ್ಲಿತ್ತು.


ಅಳುಪ ಅರಸರು ದುರ್ಬಲವಾದ ಬಳಿಕ ಉತ್ತರ ಕಾಸರಗೋಡಿನ ಭಾಗವು ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಗೆ ಒಳಪಡುತ್ತದೆ. 14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಯಿತು. ಇದರ ಸಾಮ್ರಾಜ್ಯ ವಿಸ್ತರಣೆಯಾದ ಬಳಿಕ ದಕ್ಷಿಣದ ಮೇರೆ ಚಂದ್ರಗಿರಿ ಎಂಬುದಾಗಿ ತಿಳಿದು ಬರುತ್ತದೆ. 14- 15ನೇ ಶತಮಾನಕ್ಕೆ ಸಂಬಂಧಿಸಿದ ವಿಜಯನಗರ ಸಾಮ್ರಾಟರ ಹೆಸರುಗಳಿದ್ದ ಶಾಸನಗಳು ಈ ಭಾಗದಲ್ಲಿ ಪತ್ತೆಯಾಗಿದೆ. ಅದರಲ್ಲೂ ಪ್ರಮುಖವಾಗಿ ವೀಂಜ ಗ್ರಾಮದ ಶಾಸನವು 1424-1446 ವಿಜಯನಗರ ಸಾಮ್ರಾಜ್ಯವನ್ನು ಆಳಿದ ‘ವೀರ ಪ್ರತಾಪ ದೇವರಾಯ’ನ ಉಲ್ಲೇಖವನ್ನು ಮಾಡುತ್ತದೆ. ಇದಲ್ಲದೆ ಮಂಗಲಪಾಡಿ ಶ್ರೀ ಸದಾಶಿವ ದೇವಾಲಯದ ಶಾಸನ, ಐಲ ದೇವಾಲಯದ ಶಾಸನ, ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಾಲಯದ ಶಾಸನ, ಈ ಶಾಸನಗಳು ವಿಜಯನಗರ ಸಾಮ್ರಾಜ್ಯ ಮತ್ತು ಗಡಿನಾಡಿಗೆ ಸಂಬಂಧ ಇತ್ತು ಎಂಬುದಾಗಿ ತಿಳಿಸಿಕೊಡುತ್ತದೆ.


ಅಳುಪರ ಸಾಮಂತರಾಗಿ ಉತ್ತರ ಕಾಸರಗೋಡನ್ನು ಆಳಿದವರೆಲ್ಲರೆಂದರೆ ತುಂಡರಸರಾದ ಕುಂಬಳೆ ಅರಸರು. ಇವರು ಕಣ್ವಪುರ ಅಥವಾ ಕಣಿಪುರವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಆಳ್ವಿಕೆಯನ್ನು ನಡೆಸಿದ್ದರು. ಇವರಿಗೆ ಸಂಬಂಧಿಸಿದ ಶಾಸನವು ಅಡೂರು ದೇವಾಲಯದಲ್ಲಿ ಪತ್ತೆಹಚ್ಚಲಾಗಿದೆ.
ಕಾಸರಗೋಡು ಭಾಗವು 14 ರಿಂದ 16ನೇ ಶತಮಾನದ ಆರಂಭದವರೆಗೂ ವಿಜಯನಗರ ಸಾಮ್ರಾಜ್ಯದ ಅದೀನದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಯಾವಾಗ ದುರ್ಬಲವಾಗುತ್ತದೆಯೋ ಆ ಸಮಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದವರು ಕೆಳದಿಯ ಅರಸರು. ಈವರೆಗೂ ಆಳ್ವಿಕೆ ನಡೆಸಿದ ಅರಸರ ಗಡಿಯಾಗಿದ್ದ ಚಂದ್ರಗಿರಿ ನದಿಯವರೆಗಿನ ಪ್ರದೇಶವು ಕೆಳದಿಯ ಅರಸರ ಕಾಲದಲ್ಲಿ ಸಾಮ್ರಾಜ್ಯದ ಗಡಿಯೂ ನೀಲೇಶ್ವರದವರೆಗೂ ವಿಸ್ತಾರವಾದದ್ದು ತಿಳಿಯಬಹುದು.


ಕಾಸರಗೋಡು ಈ ಭಾಗದಲ್ಲಿ ಕೆಳದಿ ಅರಸರ ಕೊಡುಗೆ ಬಹಳಷ್ಟಿದೆ. ಅವರ ಕೊಡುಗೆಗಳು ಇಲ್ಲಿನ ಕೋಟೆ- ಕೊತ್ತಲಗಳು, ದೇವಾಲಯಗಳು, ವೀರಗಲ್ಲು ಮಾಸ್ತಿಗಲ್ಲು ಶಾಸನಗಳು, ಗಡಿಕಲ್ಲುಗಳಿಂದ ತಿಳಿಯಬಹುದಾಗಿದೆ. ಇಲ್ಲಿರುವ ಪ್ರಮುಖ ವೀರಗಲ್ಲು ಶಾಸನಗಳೆಂದರೆ ಕೂಡ್ಲು ಶ್ರೀ ಕುತ್ಯಾಳ ಗೋಪಾಲಕೃಷ್ಣ ದೇವಾಲಯದ ಎದುರಿಗಿರುವ ಚಚೌಕಕಾರದ ವೀರಗಲ್ಲು ಮತ್ತು ದೇವಾಲಯದ ಒಳಗೆ ಶಾಸ್ತ ಗುಡಿಯ ಪಕ್ಕದಲ್ಲಿರುವ ವೀರಗಲ್ಲು, ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಒಳಗಿರುವ ವೀರಗಲ್ಲು, ಅಂಬಾರು ಸದಾಶಿವ ದೇವಾಲಯದ ವೀರಗಲ್ಲು ಪ್ರಮುಖವಾಗಿದೆ.
ಇದಲ್ಲದೆ ಬೇಕಲ, ಚರ್ಕಳ ಮುಂತಾದ ಭಾಗದಲ್ಲಿನ ಮಾಸ್ತಿಗುಡ್ಡೆಗಳು ಕೆಳದಿ ಕಾಲದ ಪ್ರಮುಖ ಪ್ರದೇಶ. ಈ ಪ್ರದೇಶಗಳು ಕೋಟೆಗಳ ಸಮೀಪವೇ ಇದೆ. ಇದಲ್ಲದೆ ಗಡಿಗಲ್ಲುಗಳು ಕೆಳದಿ ಅರಸರ ಮಾಹಿತಿಯನ್ನು ನೀಡುತ್ತದೆ.

ಕೆಳದಿ ಅರಸರು ದುರ್ಬಲವಾದ ಬಳಿಕ ಈ ಪ್ರದೇಶಗಳು ಹೈದರ್ ಮತ್ತು ಟಿಪ್ಪುವಿನ ವಶವಾದವು. ಆತನ ಮರಣದ ಬಳಿಕ ಈ ಪ್ರದೇಶ ಬ್ರಿಟೀಷರ ವಶವಾಯಿತು.


ಹೀಗೆ ಕಾಸರಗೋಡು ಭಾಗದಲ್ಲಿನ ಶಾಸನಗಳನ್ನು ಅವಲೋಕನ ಮಾಡಿದಾಗ ಇಲ್ಲಿನ ರಾಜಕೀಯ ಸಂಸ್ಕೃತಿಕ ಸಾಮಾಜಿಕ ಧಾರ್ಮಿಕ ವಿಚಾರಗಳು ಮತ್ತು ರಾಜನ ಕೊಡುಗೆಗಳ ಜೊತೆಗೆ ಇತಿಹಾಸದ ಪುನರ್ ರಚನೆಗೆ ,ಇತಿಹಾಸದ ಕಾಲಾನುಕ್ರಮದ ಜೋಡಣೆಗೆ ಈ ಶಾಸನಗಳು ಸಹಕಾರಿಯಾಗುತ್ತದೆ. ಕನ್ನಡ ಮತ್ತು ತುಳು ಲಿಪಿಗಳ ವಿಕಾಸ ಈ ಶಾಸನಗಳಿಂದ ತಿಳಿಯಬಹುದಾಗಿದೆ.ಈ ಶಾಸನಗಳು ಪ್ರಮುಖ ಪುರಾತತ್ವ ದಾಖಲೆಗಳಾಗಿದೆ ಇದರ ರಕ್ಷಣೆ ಅಗತ್ಯವಾಗಿದೆ.

✍🏻ಗಿರೀಶ್ ಪಿಎಂಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!