ಕೈಬೀಸಿ ಕರೆಯುವ ಬೇಕಲಕೋಟೆ…

ಕೇರಳ ರಾಜ್ಯದ ಸ್ವರ್ಣ ಕಿರೀಟದಂತೆ ,ಗಜರಾಜನಂತೆ, ಸಪ್ತ ಭಾಷೆಯ ಸಂಗಮ ನಾಡು ತುಳು, ಮಲಯಾಳಂ, ಕನ್ನಡ, ಮರಾಠಿ, ಬ್ಯಾರಿ ,ಕೊಂಕಣಿ, ಉರ್ದು ಭಾಷೆಗಳ ಪೊರೆಯುವ ತೊಟ್ಟಿಲು ಈ ಗೂಡು. ಚರಿತ್ರೆಯ ಪುಟಗಳನ್ನು ಒಮ್ಮೆ ಇಣುಕಿ ನೋಡಿದರೆ ಭವ್ಯವಾದ ಇಕ್ಕೇರಿ ನಾಯಕರು ಕಟ್ಟಿದ ಬೇಕಲ ಕೋಟೆ ಮತ್ತು ಅದರ ಅಕ್ಕಪಕ್ಕದ ನೆಲೆಗಳು ಪುಳಕಿಸುವಂತದ್ದು.

ಸರ್ವ ಧರ್ಮದ ಶಾಂತಿಯ ತೋಟವಾಗಿರುವ, ದೈವಗಳ ಆರಾಧನೆಯ ಬೀಡಾಗಿರುವ ಕಾಸರಗೋಡು ದೇವಾಲಯಗಳಿಗೆ, ಮಂದಿರಗಳಿಗೆ, ಪಳ್ಳಿಗಳಿಗೆ ಹೆಸರುವಾಸಿ. ಉದಾಹರಣೆ ಮಧೂರು, ಅಡೂರು, ಅನಂತಪುರ , ಮಾಲಿಕ್ ದಿನಾರ್ ಹೀಗೆ ಅನೇಕ ಆರಾಧನಾಲಯಗಳು ಇಲ್ಲಿವೆ. ಇದರಿಂದಾಗಿಯೇ ಕಾಸರಗೋಡಿಗೆ ವಾಸ್ತುಶಿಲ್ಪದ ತೊಟ್ಟಿಲ ತೂಗುವ ನಾಡೆಂಬ ಹೆಸರು ಬಂದಿದೆ.

ಬೇಕಲ ಕೋಟೆ ನನ್ನೊಳಗಿನ ಅನುಬಂಧವೂ, ಕಿರಿವಯಸಿನಲ್ಲಿಯೇ ಶುರುವಾದ ಒಡನಾಟವು ಇಂದಿಗೂ ಕೂಡ ಹಸನಾಗಿದೆ. ಕಾಸರಗೋಡು ಮೂಲದವನೇ ಆದ ನನಗೆ ಈ ಕೋಟೆಯ ಸವಿಯ ನೆನೆಯುವುದೆಂದರೆ ಹರುಷ. ದಕ್ಷಿಣದಿ ಅಲೆ ಅಲೆಯುವ ಸೋಜಿಗದ ಅರಬ್ಬಿ ಸಮುದ್ರದ ಝೇಂಕಾರದ ಸದ್ದು ಕಿವಿಗೆ ಇಂಪು, ತಂಗಾಳಿಯ ತಂಪು… ಗರಿಗೆದರಿದ ಕಿರು ಓಲೆಯ ಮಡಲಿನ ತೆಂಗಿನ ಸಾಲು ಕೊನೆಯಿಲ್ಲದ ನೀಲಾಗಾಸದ ಒಡಲು, ಹಾರಾಡುವ ಹಕ್ಕಿಗಳ ಸಾಲು… ಈ ಸೌಂದರ್ವನ್ನು ಬಣ್ಣಿಸಲು ಶಬ್ದಗಳು ಸಾಲದು.


40 ಎಕರೆಯ ಕೋಟೆ!


ಹುಲುಸಾಗಿ ಬೆಳೆದ ಕೋಟೆಯ ಇತಿಹಾಸವನ್ನೂ ತಿಳಿಯುತ್ತಾ ಹೋಗುವ. ಸೂರ್ಯಾಸ್ತಮಾನದ ಸುಂದರ ದೃಶ್ಯವನ್ನು ಕಣ್ಣಲ್ಲಿ ಸೆರೆ ಹಿಡಿದು ಅದನ್ನು ನೆನಪಿನ ಬುತ್ತಿಯಲ್ಲಿ ಭದ್ರಮಾಡಿ ಇಟ್ಟುಕೊಳ್ಳುವಂತಹ ತಾಣ ಯಾವುದಾದರೂ ಇದ್ದರೆ ಅದು ನಮ್ಮ ಕನ್ನಡಿಗರ ಹೆಮ್ಮೆಯ ಕೋಟೆ, ಗಡಿನಾಡ ಉಸಿರು ಕೇರಳ ರಾಜ್ಯದ ಸ್ವರ್ಣ ಕಿರೀಟ ಕಾಸರಗೋಡು ಜಿಲ್ಲೆಯಲ್ಲಿರುವ ಬೇಕಲಕೋಟೆ. ಬೇಕಲಕೋಟೆಯ ಐತಿಹ್ಯ ನೋಡುವುದಾದರೆ ಸೇನಾ ಕಾರ್ಯಚಟುವಟಿಕೆಗಳ ಚುರುಕಿಗಾಗಿ, ರಕ್ಷಣಾ ಕಾರ್ಯದ ಉದ್ದೇಶದಿಂದ ಕೆಳದಿಯ ನಾಯಕರು ಕಟ್ಟಿದ ಸುಂದರ ಕೋಟೆಯಿದು.

ಇದು ಕೇರಳ ರಾಜ್ಯದ ಅತಿ ದೊಡ್ಡ ಕೋಟೆಯೂ ಹೌದು. ಸರಿ ಸುಮಾರು 40 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕೋಟೆ ಹರಡಿದೆ. ಬತ್ತೇರಿ, ಉದ್ದನೆಯ ಸಮುದ್ರ ಕಿನಾರೆಗೆ ಮುಖಮಾಡಿರುವ ಹಾದಿ, ರಕ್ಷಣೆಗಾಗಿ ಕೋಟೆಯಲ್ಲಿ ಕಾಣುವಂತಹ ಕಿಂಡಿ, ಸಾಗರ ವೀಕ್ಷಣಾ ಗೋಪುರವನ್ನು ನಾವಿಲ್ಲಿ ಕಾಣಬಹುದು.


ಹಿರಿಯ ವೆಂಕಟಪ್ಪನಾಯಕನು ಕೋಟೆಯ ನಿರ್ಮಾಣಕ್ಕೆ ಶಿಲಾನ್ಯಾಸ ಹಾಕಿದನು. ಶಿವಪ್ಪ ನಾಯಕ ನಿರ್ಮಾಣಕಾರ್ಯ ಪೂರ್ಣಗೊಳಿಸಿದನು. ಕಾಲಾನಂತರದಲ್ಲಿ ಈ ಕೋಟೆ ಟಿಪ್ಪುವಿನ ವಶವಾಯಿತು. ಟಿಪ್ಪುವಿನ ಮರಣಾನಂತರ ಬ್ರಿಟಿಷ್ ಈಸ್ಟ್ ಇಂಡಿಯಾದ ಕಂಪೆನಿಯ ವಶವಾಯಿತು. ಕೋಟೆಯಲ್ಲಿ ಯಾವುದೇ ಅರಮನೆಗಳು ಇದ್ದ ಕುರುಹುಗಳಿಲ್ಲ. ಶಸ್ತ್ರಾಸ್ತ್ರಗಳ ರಕ್ಷಣೆಗಾಗಿ ಹೆಸರುವಾಸಿಯಾಗಿತೆಂದು ಇತಿಹಾಸಕಾರರು ಹೇಳುತ್ತಾರೆ. ಕೋಟೆಯ ಮುಖ್ಯದ್ವಾರದ ಬಳಿ ಮುಖ್ಯಪ್ರಾಣನ ದೇವಾಲಯ ಇದೆ.

ಬೇಕಲ ಕೋಟೆಯಂತೆ ಕಾಸರಗೋಡು ಜಿಲ್ಲೆಯಲ್ಲಿ ಕುಂಬ್ಳೆ ಕೋಟೆ, ಚಂದ್ರಗಿರಿ ಕೋಟೆ, ಹೊಸದುರ್ಗ ಕೋಟೆ ಎಂಬ ಕೋಟೆಗಳಿವೆ. ಇವುಗಳಲ್ಲಿ ಬೇಕಲಕೋಟೆ ಜಗತ್ ವಿಖ್ಯಾತಿ ಪಡೆದಿದೆ.


ಬೇಕಲ ಕೋಟೆಯು ಕಾಸರಗೋಡು-ಕಾಞಂಗಾಡ್ ಮುಖ್ಯ ರಸ್ತೆಯ ಮೂಲಕ ಹಾದು ಹೋಗುವ ಮಾರ್ಗದ ಮಧ್ಯೆ ಬರುತ್ತದೆ. ಕಾಸರಗೋಡು ಜಿಲ್ಲೆಯಿಂದ 15 ಕಿಲೋಮೀಟರ್, ಮಂಗಳೂರು ನಗರದಿಂದ 68 ಕಿಲೋಮೀಟರ್, ಹಾಗೂ ಬೆಂಗಳೂರು ನಗರದಿಂದ ಸುಮಾರು 369 ಕಿಲೋಮೀಟರ್ ದೂರ ಇದೆ. ಇಲ್ಲೇ ಸಮೀಪವೇ ಬೇಕಲ್ ಫೋರ್ಟ್ ರೈಲ್ವೆ ನಿಲ್ದಾಣ ಕೂಡ ಇದೆ. ಇದಲ್ಲದೆ ಬೇಕಲ ಬೀಚ್ ಮತ್ತು ರೆಡ್ ಮೂನ್ ಬೀಚ್ ಎಂಬ ಅವಳಿ ಬೀಚ್ಗಳು ಇಲ್ಲೇ ಸಮೀಪದಲ್ಲಿ ಇದೆ. ಮತ್ಯಾಕೆ ತಡ ಇಂದೇ ಬನ್ನಿ. ಕೋಟೆಯ ಸವಿಯನ್ನು ಸವಿಯಿರಿ. ಮಳೆಗಾಲದಲ್ಲಂತು ಕೋಟೆಯು ರಮಣೀಯವಾಗಿರುತ್ತದೆ.

✍🏻-ಗಿರೀಶ್ ಪಿಎಂ ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!