ಮೋಸ ಹೋಗುವ ಮನಸಿನವರು ಪ್ರತಿ ಬಾರಿ ಮೋಸ ಹೋಗ್ತಾನೇ ಇರುತ್ತಾರೆ. ಅದು ತಿಳಿಯದೆ, ಅರಿಯದೆ, ಎಂಬುದಕ್ಕಿಂದ ಅತಿಯಾದ ವಿಶ್ವಾಸದಿಂದಲೇ ಆಗಿರುತ್ತದೆ. ಅದು ಅರಿವಿಗೆ ಬಂದಾಗ ಮನಸ್ಸಿಗೆ ತೀವ್ರ ಘಾಸಿಯಾಗುತ್ತದೆ. ಅದು ಕನಸಿನ ಕೋರಿಕೆಗೆ, ಮನಸ್ಸಿನ ಬೇಡಿಕೆಗೆ, ತನುವಿನ ಉಲ್ಲಾಸಕ್ಕೆ ತಣ್ಣೀರು ಎರಚುವುದಂತೂ ಖಂಡಿತಾ.
ಕೆಲವು ಸಾರಿ ಅರಿಯದೆ, ಯಾರನ್ನೋ ಅರಿತುಕೊಳ್ಳಬೇಕೆನ್ನುವ ಮಹದಾಸೆಯಿಂದ ಗೆಳೆತನ ಮಾಡಿಬಿಡುತ್ತೇವೆ. ಆದರೆ ಮುಂದೆ ಗೊತ್ತಾಗುವಾಗ ತಡವಾಗುತ್ತದೆ, ಆ ಪರಿಚಯವೇ ಬಾಳಿಗೆ ಮುಳುವಾಗಿರುತ್ತದೆ. ಪ್ರತಿ ಬಾರಿಯೂ ಹಾಗೆಂದಲ್ಲ, ಆದರೆ ಅನೇಕರಿಗೆ ಇದರ ಅನುಭವ ಆಗಿಯೇ ಆಗುತ್ತದೆ.
ಹೊಸ ಪರಿಚಯ ಆರಂಭದಲ್ಲಿ ಬದುಕಿನ ಭಾಗವೇ ಅನ್ನಿಸಿಬಿಡುತ್ತದೆ. ಆದರೆ ಹೋಗ್ತಾ ಹೋಗ್ತಾ ಗೊತ್ತಾಗುತ್ತದೆ, ಆ ಪರಿಚಯವೇ ಬದುಕಿಗೆ ಪಾಠ ಕಲಿಸಿಕೊಡುತ್ತದೆ ಎಂದು. ಕೆಲವು ಮುಗ್ಧ ಮನಸ್ಸುಗಳೇ ಹಾಗೆ ಮತ್ತೊಬ್ಬರನ್ನು ನಂಬಿಬಿಡುತ್ತವೆ. ಮುಂದೆ ಆ ನಂಬಿಕೆ ಸುಳ್ಳಾಗುತ್ತೆ ಎಂಬ ಸಣ್ಣ ಸೂಚನೆ ಅರಿವಿಗೂ ಬಾರದೆ, ಪರಿಚಯ ಕೊನೆಯ ತನಕ ಉಳಿಯುತ್ತದೆ ಎನ್ನುವ ನಂಬಿಕೆ ಇರುತ್ತದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಅದಕ್ಕೆ ತದ್ವಿರುದ್ಧವಾದ ಘಟನೆಯೇ ನಡೆದಿರುತ್ತದೆ.
ಒಮ್ಮೆ ನಂಬಿಕೆ ಬೆಳೆಸಿದ ಮೇಲೆ ಅಂತವರ ಮೇಲೆ ಪ್ರೀತಿ, ಕಾಳಜಿ, ಸಹನೆ ಎಲ್ಲವೂ ತಾನಾಗಿ ಹುಟ್ಟುತ್ತದೆ. ಆದರೆ ಯಾರೋ ನಮ್ಮ ನಂಬಿಕೆಯ ಜೊತೆಗೆ ಆಟ ಆಡುತ್ತಾರೆ ಎನ್ನುವ ವಿಚಾರ ತಿಳಿದ ಮರುಕ್ಷಣ, ಆ ಪ್ರೀತಿ, ಕಾಳಜಿ, ಸಹನೆ ಎಲ್ಲವೂ ಒಂದರಂತೆ ಒಂದು ಸಾಯುತ್ತಾ ಹೋಗುತ್ತವೆ. ಹೀಗ್ಯಾಕೆ ಆಯಿತು ಎಂದು ಗೊಂದಲ, ಬೇಸರ ಹುಟ್ಟುತ್ತದೆ. ಅದು ತಾನು ಸಾಯುತ್ತಲೇ ಈವರೆಗೆ ತನಗೆ ಆಶ್ರಯ ನೀಡಿದ ಮನಸ್ಸಿಗೂ ಅಪಾರ ನೋವನ್ನು ಉಂಟು ಮಾಡುತ್ತೆ. ಆ ಸಮಯದಲ್ಲಿ ನಿಜಾಂಶದ ಅರಿವಾದಾಗ ʼಮೂರ್ಖನಾದೆʼ ಅನಿಸುತ್ತದೆ. ಜೀವನದಲ್ಲಿ ನಂಬಿಕೆಯೇ ಮುಳುವಾಯಿತೆ ಎಂದು ಬೇಸರವಾಗುತ್ತೆ. ಮತ್ತೊಬ್ಬರನ್ನು ನಂಬುವ ಮೊದಲು ಮನಸ್ಸು ಹತ್ತು ಬಾರಿ ಚಿಂತಿಸಲು ಆರಂಭಿಸುತ್ತದೆ. ಆ ಕ್ಷಣ ವಿಚಲಿತನಾಗದೆ, ಆದರೆ ಮುಂದೆ ಮೋಸ ಹೋಗದಂತೆ ನೋಡಿಕೊಳ್ಳಬೇಕಷ್ಟೇ.
ಗೆಳೆತನ, ನಂಬಿಕೆ ಎಂಬ ಮುಖವಾಡವನ್ನು ಧರಿಸಿ ಬಂದವರ ಹಿನ್ನಲೆಯೂ ಅರಿಯದೆ ಅವರ ಮೇಲೆ ಹುಟ್ಟಿಕೊಂಡ ನಂಬಿಕೆ ಹಾಳಾದಾಗ ಉಂಟಾಗುವ ಅನುಭವ ನಿಜಕ್ಕೂ ಜೀವನ ಪಾಠವಾಗಿರುತ್ತದೆ. ಆ ಅನುಭವ ಬದುಕಿಗೆ ಜಗತ್ತಿನ ಮತ್ತಷ್ಟು ಆಯಾಮಗಳ ಪರಿಚಯ ಮಾಡಿಕೊಡುತ್ತದೆ.
ಇದರಿಂದ ನಾವು ತಿಳಿಯಬಹುದಾದ ಅಂಶವೇನೆಂದರೆ, ಯಾರನ್ನು ಬಹುಬೇಗನೆ ನಂಬಬಾರದು. ಮೂರ್ಖನೆಂದು ಈ ಜಗದಲ್ಲಿ ತಿಳಿದವರನ್ನು ಮೋಸ ಮಾಡಲು ಹೆಚ್ಚಿನ ಸಮಯವಿಲ್ಲ ಬೇಕಾಗಿರುವುದಿಲ್ಲ ಮೋಸಗಾರರಿಗೆ. ಮೂರ್ಖನಾಗಬೇಡಿ, ಮೋಸಕ್ಕೆ ಮೂರ್ಛೆ ಹೋಗಬೇಡಿ. ಈ ಬಗ್ಗೆ ಎಚ್ಚರವಿರಲಿ. ಇದುವೇ ಜೀವನದ ಸತ್ಯ.
✍🏻✍🏻ಗಿರೀಶ್ ಪಿಎಂ ಕಾಸರಗೋಡು