ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬಾಯಿಯಲ್ಲಿ ಯು.ಎ.ಇ. ಬಂಟ್ಸ್ ಮತ್ತು ಯು.ಎ.ಇ.ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ಫೆಬ್ರವರಿ 8ನೇ ತಾರೀಕಿನಂದು ತುಳುನಾಡ ಸಂಸ್ಕೃತಿಯ ಅನಾವರಣ ಉಪನ್ಯಾಸ ಕಾರ್ಯಕ್ರಮ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಶ್ರೀ ಬಾರ್ಕೂರು ಮಹಾ ಸಂಸ್ಥಾನ (ಭಾರ್ಗವಬೀಡು ಬಾರ್ಕೂರು) ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ|| ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ಪ್ರವಚನ ಹಾಗೂ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.ಸುಮಂಗಲೆಯರ ಪೂರ್ಣ ಕುಂಭ ಹಾಗೂ ಚೆಂಡೆ ವಾದನದೊಂದಿಗೆ ಪರಮ ಪೂಜ್ಯ ಸ್ವಾಮಿಜಿಯವರನ್ನು ಬರಮಾಡಿಕೊಂಡು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಬುಧಾಭಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿಯವರು ಸ್ವಾಗತ ಮತ್ತು ಪರಿಚಯ, ಯು,ಎ,ಇ ಬಂಟ್ಸ್ ನ ಅಧ್ಯಕ್ಷರು ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರಿಂದ ಪ್ರಾಸ್ಥವಿಕ ಭಾಷಣದಲ್ಲಿ ಬಾರ್ಕೂರು ಮಹಾ ಸಂಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಶ್ರೀ ಶ್ರೀ ಶ್ರೀ ಡಾ|| ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರಿಗೆ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಸರ್ವ ಸಂಘಟನೆಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಪ್ರಕ್ರಿಯೆಯಲ್ಲಿ ಶ್ರೆಯುತರುಗಳಾದ ಸರ್ವೋತ್ತಮ ಶೆಟಿ, ಪ್ರವೀಣ್ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಬಿ. ಕೆ. ಗಣೇಶ್ ರೈಯವರು ಪಾಲ್ಗೊಂಡಿದ್ದರು.
ಪರಮ ಪೂಜ್ಯರು ತುಳುನಾಡಿನ ಸಮಗ್ರ ಇತಿಹಾಸ ಮತ್ತು ಧಾರ್ಮಿಕ ಆಚರಣೆಗಳು, ದೈವಾರಾಧನೆ, ಭೂತಾರಾಧನೆ, ಅತ್ಯಂತ ಕ್ರಮಬದ್ಧವಾಗಿ ನಡೆಯುತಿದ್ದ ಸಾಂಪ್ರದಾಯಿಕ ವಿವಾಹಗಳು ಇಂದು ಹಾದಿ ತಪ್ಪಿ ತುಳುನಾಡಿಗೆ ಸಂಬಂಧವಿಲ್ಲದೆ ಇರುವ ಆಚರಣೆಗೆ ಜೋತು ಬಿದ್ದು ಮೌಢ್ಯತೆಯಲ್ಲಿ ನಡೆಯುತ್ತಿರುವ ಆಚರಣೆಗೆ ತಮ್ಮ ಕಳವಳ ವ್ಯಕ್ತಪಡಿಸಿದರು.ಸಭೆಯಲ್ಲಿ ಡಾ. ಬಿ. ಆರ್. ಶೆಟ್ಟಿಯವರು, ಡಾ. ಸಂತೋಷ್ ಗುರೂಜಿಯವರ ಸನಾತನ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸುವ ಕಾರ್ಯಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭವನ್ನು ಹಾರೈಸಿದರು.
ಶ್ರೀಯುತ ರಾಜೇಶ ಕುತ್ತಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಸರ್ವರಿಗೂ ವಂದನೆಯನ್ನು ಸಲ್ಲಿಸಿದರು.ಕೊನೆಯಲ್ಲಿ ಸರ್ವರಿಗೂ ಉಪಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಹಲವಾರು ವಿಷೇಷ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದು, ಕನ್ನಡಿಗರ ಮಾಲಿಕತ್ವದ ಫಾರ್ಚೂನ್ ಪ್ಲಾಝಾ ಹೋಟೆಲ್ ದುಬಾಯಿ ಸಭಾಂಗಣ ಮತ್ತೊಮ್ಮೆ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ಗಣೇಶ್ ರೈ – ದುಬಾಯಿ