ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಮಹತ್ವದ ಬೆಳವಣಿಗೆಯಲ್ಲಿ ಇರಾನ್ ತನ್ನ ನೆರೆಯ ರಾಷ್ಟ್ರಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ಘೋಷಿಸಿದೆ. ಆದರೆ ನೆರೆಯ ದೇಶಗಳ ಭೂಭಾಗದಿಂದ ತನ್ನ ಮೇಲೆ ದಾಳಿ ನಡೆದರೆ ಮಾತ್ರ ಪ್ರತಿದಾಳಿ ನಡೆಸುವುದಾಗಿ ಇರಾನ್ ಸ್ಪಷ್ಟಪಡಿಸಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಸ್ಕಿಯಾನ್ ಮಾತನಾಡಿ, ನೆರೆ ದೇಶಗಳೊಂದಿಗೆ ಸ್ನೇಹಭಾವ ಉಳಿಸಿಕೊಳ್ಳಲು ಬಯಸುತ್ತೇವೆ. ಮುಂದಿನ ದಿನಗಳಲ್ಲಿ ಅವರ ಮೇಲೆ ದಾಳಿ ಮಾಡುವುದಿಲ್ಲ ಎಂದು ತಿಳಿಸಿದರು. ಆದರೆ ಯಾವುದೇ ಪರಿಸ್ಥಿತಿಯಲ್ಲಿಯೂ ಇಸ್ರೇಲ್ ಹಾಗೂ ಅಮೆರಿಕದ ಮುಂದೆ ಶರಣಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇರಾನ್ ಪರಮಾಣು ಶಸ್ತ್ರಾಸ್ತ್ರ ನಿರ್ಮಾಣ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಇಸ್ರೇಲ್ ಸೇನೆ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹಾಗೂ ಅವರ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ಇದಕ್ಕೆ ಪ್ರತಿಯಾಗಿ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಗಂಭೀರವಾಗಿದೆ. ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಶರಣಾಗಬೇಕು ಎಂದು ಎಚ್ಚರಿಕೆ ನೀಡಿದ್ದು, ಹೊಸ ನಾಯಕತ್ವವನ್ನು ತರಲು ಇರಾನ್ ಜನತೆಗೆ ಸಲಹೆ ನೀಡಿದ್ದಾರೆ.
ಇತ್ತ ಜಾಗತಿಕವಾಗಿ ತೈಲ ಹಾಗೂ ಅನಿಲದ ಬೆಲೆ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ಭಾರತದಲ್ಲೂ ಅಡುಗೆ ಅನಿಲ ದರ ಏರಿಕೆಯಾಗಿದೆ. ಜೊತೆಗೆ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ ನೀಡಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇದರ ನಡುವೆ ಅಮೆರಿಕಾದ ದಾಳಿಯಿಂದ ರಷ್ಯಾಕ್ಕೆ ಲಾಭವಾಗುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮಾರಾಟವನ್ನು ಹೆಚ್ಚಿಸಿದೆ ಎಂಬ ವರದಿಗಳು ಹೊರಬಿದ್ದಿವೆ.