ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತತ್ಕ್ಷಣ ಯಾವುದೇ ಏರಿಕೆ ಇಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಸೋಮವಾರ ಸ್ಪಷ್ಟಪಡಿಸಿವೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ದೇಶದಲ್ಲಿ ಸಾಕಷ್ಟು ಇಂಧನ ದಾಸ್ತಾನು ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು, ಇದರ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರಗಳು ಹೆಚ್ಚಳ ಕಂಡಿವೆ. ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರೆಲ್ಗೆ ಸುಮಾರು 120 ಅಮೆರಿಕನ್ ಡಾಲರ್ಗೆ ಏರಿಕೆಯಾಗಿದೆ. ಯುದ್ಧ ಆರಂಭವಾದಾಗಿನ ದರಕ್ಕಿಂತ ಇದು ಸುಮಾರು 65 ಶೇಕಡಾ ಹೆಚ್ಚು ಎಂದು ಹೇಳಲಾಗಿದೆ.
ಆದಾಗ್ಯೂ, ಚಿಲ್ಲರೆ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಕ್ಷಣ ಹೆಚ್ಚಿಸುವ ಯಾವುದೇ ಯೋಜನೆ ಸರ್ಕಾರಕ್ಕಿಲ್ಲ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರಸ್ತುತ ವೆಚ್ಚದ ಒತ್ತಡವನ್ನು ಸದ್ಯಕ್ಕೆ ತಾವೇ ನಿಭಾಯಿಸುವ ನಿರೀಕ್ಷೆಯಿದೆ.
ಇಂಧನ ಪೂರೈಕೆ ನಿರಂತರವಾಗಿರಲು ಸರ್ಕಾರ ಕ್ರಮಗಳನ್ನು ಬಲಪಡಿಸಿದ್ದು, ಮುಂದಿನ 6–8 ವಾರಗಳ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಕಚ್ಚಾ ತೈಲ ಮತ್ತು ಸಿದ್ಧಪಡಿಸಿದ ಇಂಧನ ಉತ್ಪನ್ನಗಳ ದಾಸ್ತಾನು ದೇಶದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರ ಮಧ್ಯೆ ಎಲ್ಪಿಜಿ ಮರುಪೂರಣದ ನೀತಿಯಲ್ಲಿ ಸರ್ಕಾರ ಬದಲಾವಣೆ ಮಾಡಿದೆ. ಮನೆ ಬಳಕೆಯ ಎಲ್ಪಿಜಿ ಸಿಲಿಂಡರ್ ಮರುಪೂರಣ ಬುಕ್ಕಿಂಗ್ಗೆ ಕನಿಷ್ಠ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಸಂಗ್ರಹಣೆ ತಡೆಗಟ್ಟುವ ಮತ್ತು ಸಿಲಿಂಡರ್ಗಳ ಸಮಾನ ವಿತರಣೆಯನ್ನು ಖಚಿತಪಡಿಸುವುದು ಉದ್ದೇಶವಾಗಿದೆ.
ಒಂದು ಮನೆ ಸರಾಸರಿ ವರ್ಷಕ್ಕೆ 14.2 ಕೆಜಿಯ 7 ರಿಂದ 8 ಎಲ್ಪಿಜಿ ಸಿಲಿಂಡರ್ಗಳನ್ನು ಬಳಸುತ್ತದೆ ಮತ್ತು ಸಾಮಾನ್ಯವಾಗಿ 6 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಮರುಪೂರಣ ಅಗತ್ಯವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೃತಕ ಕೊರತೆ ಉಂಟಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.