ಉಡುಪಿ: ದೇಶಕ್ಕಾಗಿ ಹೋರಾಡಿದ ನಿವೃತ್ತ ಸೈನಿಕನಿಗೆ ಗಣರಾಜ್ಯೋತ್ಸವ ದಿನದಂದೇ ಅವಮಾನಪಡಿಸಿದ ಘಟನೆ ಬ್ರಹ್ಮಾವರ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಡೆದಿದೆ. ಸಾಸ್ತಾನ ಟೋಲ್ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ನೀಡಲಾಗುವ ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ನಿವೃತ್ತ ಸೈನಿಕ ಶ್ಯಾಮರಾಜ್ ಅವರು ವಿಡಿಯೋ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶ್ಯಾಮರಾಜ್ ಅವರು ಇವಿ-21ನೇ ಪ್ಯಾರಾ ಸ್ಪೆಷಲ್ ಫೋರ್ಸ್ ಪ್ಯಾರಾಟೂಪರ್ ಆಗಿದ್ದು, ಕಾಸರಗೋಡು ಜಿಲ್ಲೆಯ ನಿವಾಸಿಯಾಗಿದ್ದಾರೆ. “ಆಪರೇಷನ್ ಪರಾಕ್ರಮ್” ಸಂದರ್ಭದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಗಿಸಿ ವಾಪಸ್ ಬರುವಾಗ, ಇವರ ವಾಹನ ಲ್ಯಾಂಡ್ಮೈನ್ ಮೇಲೆ ಹರಿದ ಪರಿಣಾಮ ಸಂಭವಿಸಿದ ಭೀಕರ ಸ್ಫೋಟದಲ್ಲಿ 15 ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆಯಲ್ಲಿ ಜೀವ ಉಳಿಸಿಕೊಂಡ ಇಬ್ಬರು ಸೈನಿಕರಲ್ಲಿ ಶ್ಯಾಮರಾಜ್ ಒಬ್ಬರಾಗಿದ್ದಾರೆ. ಸುಮಾರು 15 ದಿನಗಳ ಕಾಲ ಕೋಮಾದಲ್ಲಿದ್ದ ಅವರು ನಂತರ ಚೇತರಿಸಿಕೊಂಡರೂ, ಬೆನ್ನುಮೂಳೆಗೆ ಗಂಭೀರ ಗಾಯವಾದ ಕಾರಣ ಇಂದು ಸಂಪೂರ್ಣ ವಿಕಲಾಂಗ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಇವರ ಪತ್ನಿಯೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಿಲಿಟರಿ ನರ್ಸಿಂಗ್ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿಯ ಪೋಸ್ಟಿಂಗ್ ಸಂಬಂಧಿತ ಪ್ರಯಾಣಕ್ಕಾಗಿ ಆರ್.ಎಮ್.ಎ ನೀಡಿದ ಅಧಿಕೃತ ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದರೂ, ಸಾಸ್ತಾನ ಟೋಲ್ ಸಿಬ್ಬಂದಿ ವಿನಾಯಿತಿ ನೀಡಿಲ್ಲ ಎಂದು ಶ್ಯಾಮರಾಜ್ ದೂರಿದ್ದಾರೆ.ವಿಡಿಯೋ ವೈರಲ್ ಆದ ಬಳಿಕ ಟೋಲ್ ಸಿಬ್ಬಂದಿ ತಮ್ಮ ತಪ್ಪನ್ನು ಅರಿತು ಶ್ಯಾಮರಾಜ್ ಅವರ ಬಳಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ