ಉಡುಪಿ: ಅಸ್ಸಾಂ ರಾಜ್ಯದ ಗುವಾಹಟಿಗೆ ಪ್ರವಾಸಕ್ಕೆ ತೆರಳಿದ್ದ ಉಡುಪಿಯ ತಂಡದಲ್ಲಿದ್ದ ಓರ್ವ ಯುವಕ ಅನಾರೋಗ್ಯದಿಂದ ಮೃತಪಟ್ಟ ಘಟನೆ ವರದಿಯಾಗಿದೆ.ಮೃತರನ್ನು ಅಶೋಕ್ ಆಚಾರ್ಯ (33) ಎಂದು ಗುರುತಿಸಲಾಗಿದೆ. ಅವರು ಉಡುಪಿ ಜಿಲ್ಲೆಯ ಕಾಪು ತಾಲೂಕು ಕಟಪಾಡಿ ಸಮೀಪದ ಸರಕಾರಿಗುಡ್ಡೆ ನಿವಾಸಿಯಾಗಿದ್ದರು.
ಪ್ರವಾಸದ ವೇಳೆ ಅಶೋಕ್ ಆಚಾರ್ಯ ಅವರಿಗೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಅಸ್ವಸ್ಥತೆ ಉಂಟಾಗಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯುವಕನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಮತ್ತು ಬಂಧುಮಿತ್ರರು ದುಃಖದಲ್ಲಿ ಮುಳುಗಿದ್ದಾರೆ.