ಉಡುಪಿ: ಶ್ರೀ ಜನಾರ್ದನ ಕಂಬಳ ವತಿಯಿಂದ ದಾನಿಗಳ ಸಹಕಾರದೊಂದಿಗೆ ಪ್ರಥಮ ವರ್ಷದ ಹೊನಲು ಬೆಳಕಿನ “ಎರ್ಮಾಳು ತೆಂಕ- ಬಡಾ ಜೋಡುಕರೆ ಕಂಬಳ” ಇದೇ ಫೆ. 28ರಂದು ಎರ್ಮಾಳು ಬಡಕೊಟ್ಟು ಬಾಕುಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ತಿಳಿಸಿದರು.
ಎರ್ಮಾಳು ರಾಮ್ ದೇವ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳ ಇತಿಹಾಸದಲ್ಲಿ ಅತೀ ಉದ್ದ (ಸುಮಾರು 151 ಮೀ.)ದ ಕರೆ ನಿರ್ಮಾಣ ಮಾಡಲಾಗಿದೆ. ತೀರ್ಪುಗಾರರ ಕೊಠಡಿ, ಎರಡು ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಕಂಬಳದ ಬಹುಮಾನ, ಟ್ರೋಫಿ, ಸ್ಮರಣಿಕೆಗಳ ಖರ್ಚು ವೆಚ್ಚವನ್ನು ಕಂಬಳ ಸಮಿತಿಯು ದಾನಿಗಳಿಂದಲೇ ಭರಿಸಿಕೊಂಡಿದೆ. ಸುಮಾರು 6,000 ಮಂದಿಗೆ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಮಾರು 200 ಜೋಡಿ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
25 ಲಕ್ಷ ರೂ. ವೆಚ್ಚದಲ್ಲಿ ಎರ್ಮಾಳು ಪುಚೊಟ್ಟುಬೀಡು ದಿ। ರತ್ನಾ ಲೋಕಯ್ಯ ಶೆಟ್ಟಿ ಸ್ಮರಣಾರ್ಥ ಮಕ್ಕಳು ನಿರ್ಮಿಸಿಕೊಟ್ಟಿರುವ ಜೋಡುಕರೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕರೆಯನ್ನು ಉದ್ಘಾಟಿಸಲಿದ್ದಾರೆ. ಬೆಳ್ಮಣ್ ವಿಘ್ನೇಶ್ ಭಟ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಎರ್ಮಾಳು ಬೀಡು ಅಶೋಕರಾಜ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ನಿರ್ದೇಶಕ, ನಟ ಉಪೇಂದ್ರ, ಸಂಗೀತ ನಿರ್ದೇಶಕ ಗುರುಕಿರಣ್, ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಚಿತ್ರನಟರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಗಣ್ಯರ ಭಾಗವಹಿಸಲಿದ್ದಾರೆ.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರ ಆಶಯದಂತೆ ಮುಂದಿನ ವರ್ಷಗಳಲ್ಲಿ ಕಂಬಳ ಅಕಾಡೆಮಿ ಕಟ್ಟಡ ನಿರ್ಮಾಣ, ಕಂಬಳ ಓಟಗಾರರ ತರಬೇತಿ ಮುಂತಾದ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡುವ ಇರಾದೆ ಕೂಡ ಇದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಮುಂಬಯಿ ಸಮಿತಿಯ ಕಾರ್ಯದರ್ಶಿ ಡಾ. ಚಿಂತನ್ ರೋಹಿತ್ ಹೆಗ್ಡೆ, ಮುಂಬಯಿ ಸಮಿತಿಯ ಅಧ್ಯಕ್ಷ ಎರ್ಮಾಳು ಹರೀಶ್ ಶೆಟ್ಟಿ, ಪುಚೊಟ್ಟುಬೀಡು ಬಾಲಚಂದ್ರ ಶೆಟ್ಟಿ, ಜಗಜೀವನ್ ಚೌಟ, ಕರ್ಣ ಪ್ರಭಾಕರ ಹೆಗ್ಡೆ, ಸಂತೋಷ್ ಶೆಟ್ಟಿ ಬರ್ಪಾಣಿ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಉಪಸ್ಥಿತರಿದ್ದರು.